ಬೆಂಗಳೂರು: ಕಿರಿಯ ಶ್ರೇಣಿ ವೃಂದದ (ಕೇಡರ್) ಅಧಿಕಾರಿಯನ್ನು ಹಿರಿಯ ಶ್ರೇಣಿ ವೃಂದಕ್ಕೆ ಬಡ್ತಿ ನೀಡಿ ವರ್ಗಾಯಿಸುವ ಆದೇಶಕ್ಕೆ ಮುಖ್ಯಮಂತ್ರಿಗಳು ಸಹಿಯೊಂದಿಗೆ ಸೂಕ್ತ ಕಾರಣ ನೀಡುವುದು ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೆಚ್ಚುವರಿ ನಿರ್ದೇಶಕರು-1 ಹುದ್ದೆಗೆ ತಮ್ಮನ್ನು ನಿಯೋಜಿಸಿದ್ದ ಸರ್ಕಾರದ ಆದೇಶ ರದ್ದುಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಟಿ) ಆದೇಶ ಪ್ರಶ್ನಿಸಿ ಹಿರಿಯ ಶ್ರೇಣಿ ವೃಂದದ ಕೆಎಎಸ್ ಅಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ರಾಜೇಶ್ ರೈ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕಿರಿಯ ಶ್ರೇಣಿ ವೃಂದದ ಅಧಿಕಾರಿಗಳನ್ನು ಹಿರಿಯ ಶ್ರೇಣಿ ವೃಂದಕ್ಕೆ ಬಡ್ತಿ ನೀಡಿ ವರ್ಗಾಯಿಸುವಾಗ ಅನುಸಬೇಕಾದ ಅಗತ್ಯ ಮಾರ್ಗಸೂಚಿಗಳನ್ನು ಪ್ರಕಟಿಸುವಂತೆಯೂ ಇದೇ ವೇಳೆ ಸರ್ಕಾರಕ್ಕೆ ತಾಕೀತು ಮಾಡಿದೆ.
ಪ್ರಕರಣದ ಹಿನ್ನೆಲೆ:ಡಾ.ಪ್ರಜ್ಞಾ ಅಮ್ಮೆಂಬಳ 2006ರಲ್ಲಿ ನೇರ ನೇಮಕಾತಿ ಮೂಲಕ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದರು. 2015ರಲ್ಲಿ ಅವರಿಗೆ ಕೆಎಎಸ್ ಕಿರಿಯ ಶ್ರೇಣಿಗೆ ಮತ್ತು 2021ರ ಜನವರಿಯಲ್ಲಿ ಕೆಎಎಸ್ ಹಿರಿಯ ಶ್ರೇಣಿ ವೃಂದಕ್ಕೆ ಬಡ್ತಿ ನೀಡಲಾಗಿತ್ತು. 2023ರ ಜು. 6ರಂದು ಅವರನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೆಚ್ಚುವರಿ ನಿರ್ದೇಶಕರಾಗಿ ವರ್ಗಾಯಿಸಲಾಗಿತ್ತು. ಈ ಹುದ್ದೆಯಲ್ಲಿದ್ದ ಅಧಿಕಾರಿ ಪಾತರಾಜು ಕೆಎಟಿಗೆ ತಕರಾರು ಅರ್ಜಿ ಸಲ್ಲಿಸಿ, ಮುಖ್ಯಮಂತ್ರಿಗಳ ಪೂರ್ವಾನುಮತಿ ಇಲ್ಲದೆ ಡಾ.ಪ್ರಜ್ಞಾ ಅವರನ್ನು ವರ್ಗಾಯಿಸಲಾಗಿದೆ ಎಂದಿದ್ದರು.
ರಾಜ್ಯ ಸರ್ಕಾರ ವಾದ ಮಂಡಿಸಿ, ಪ್ರಜ್ಞಾ ವರ್ಗಾವಣೆಗೆ ಮುಖ್ಯಮಂತ್ರಿಗಳು ಪೂರ್ವಾನುಮತಿ ನೀಡಿದ್ದರು ಎಂದು ಸಮರ್ಥಿಸಿಕೊಂಡಿತ್ತು. ಆದರೆ, ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಹುದ್ದೆ ಹೊಂದಲು ಪ್ರಜ್ಞಾ ಅನರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದ ಕೆಎಟಿ, ಅವರ ವರ್ಗಾವಣೆ ಆದೇಶ ರದ್ದುಪಡಿಸಿ, ಪಾತರಾಜು ಅವರನ್ನು ನಿರ್ದೇಶಕರ ಹುದ್ದೆಯಲ್ಲಿ ಮುಂದುವರಿಸಲು ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರಜ್ಞಾ ಹೈಕೋರ್ಟ್ ಮೆಟ್ಟಿಲೇರಿದ್ದರು.