ಕರ್ನಾಟಕ

karnataka

ETV Bharat / state

ಸಿಎಂ ನಾಯಕತ್ವ ಬದಲಾವಣೆ ವಿಚಾರ.. ಕೇಂದ್ರದ ವಿರುದ್ಧ ಕನ್ನಡ ಪರ ಹೋರಾಟಗಾರರ ಗುಡುಗು!

ರಾಜ್ಯದಲ್ಲಿ ಸಿಎಂ ಆಗಿ ಯಡಿಯೂರಪ್ಪ ಮುಂದುವರಿಯಬೇಕೆಂದು ಈಗಾಗಲೇ ಅನೇಕ ಮಠಾಧೀಶರು ಬೆಂಬಲ ನೀಡುತ್ತಿದ್ದಾರೆ. ಈ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ಕೂಡ ಬಿಎಸ್​ವೈ ನಾಯಕತ್ವಕ್ಕೆ ಜೈ ಅಂದಿದ್ದು, ಹೈಕಮಾಂಡ್ ವಿರುದ್ಧ ಹರಿಹಾಯ್ದಿವೆ.

ಕೇಂದ್ರದ ವಿರುದ್ಧ ಕನ್ನಡ ಪರ ಹೋರಾಟಗಾರ ಗುಡುಗು
ಕೇಂದ್ರದ ವಿರುದ್ಧ ಕನ್ನಡ ಪರ ಹೋರಾಟಗಾರ ಗುಡುಗು

By

Published : Jul 22, 2021, 7:11 AM IST

ಬೆಂಗಳೂರು: ಬಿಜೆಪಿ ಹೈಕಮಾಂಡ್ ಕರ್ನಾಟಕ ಜನರ ನಿರೀಕ್ಷೆಗೆ ತಕ್ಕಷ್ಟು ಪ್ರತಿಫಲ ನೀಡಿಲ್ಲ. ಆದರೂ ನಮ್ಮ ನಾಡಿನಲ್ಲಿ ಯಡಿಯೂರಪ್ಪ ಅವರು, ಗಂಡೆದೆಯಿಂದ ಪಕ್ಷ ಕಟ್ಟಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದಾರೆ. ಇಂಥ ಮಹಾನ್​ ನಾಯಕರನ್ನು ಅಧಿಕಾರದಿಂದ ಕಿತ್ತೊಗೆಯುವ ಕೆಲಸಕ್ಕೆ ಕೈ ಹಾಕುವ ಮೂಲಕ ನಿಮ್ಮ ಸಿದ್ಧಾಂತವನ್ನು ಇಡೀ ಕನ್ನಡಿಗರಿಗೆ ತೋರಿಸಿ ಕೊಡುತ್ತಿದ್ದೀರಾ? ಈ ಬಗ್ಗೆ ನಾವು ಕನ್ನಡಿಗರೆಲ್ಲರೂ ಒಮ್ಮತದ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಿಜೆಪಿ ಹೈಕಮಾಂಡ್​ಗೆ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರದ ವಿರುದ್ಧ ಕನ್ನಡ ಪರ ಹೋರಾಟಗಾರರ ಗುಡುಗು

‘ಎಲ್ಲರ ಮೇಲೆ ಗೌರವವಿದೆ’

ಸಿಎಂ ಬದಲಾವಣೆ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳು ಕಂಡು ಬರುತ್ತಿರುವ ಹಿನ್ನೆಲೆ ಮಾತನಾಡಿದ ಪ್ರವೀಣ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಈವರೆಗೂ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ಕೊಟ್ಟಿಲ್ಲ. ನಾವು ಅನೇಕ ಸಂದರ್ಭಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೆ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯರನ್ನು ಹಲವಾರು ಬಾರಿ ಭೇಟಿ ಮಾಡಿದ್ದೇವೆ. ಎಲ್ಲಾ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ ಎಂದರು.

ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದು, ಕೆಜೆಪಿ ಪಕ್ಷ ಕಟ್ಟಿದಾಗ ಕರ್ನಾಟಕದ ಪಕ್ಷವಾಗುತ್ತದೆ ಎಂದು ಬೆಂಬಲಿಸಿದ್ದೇವೆ. ಇವರೆಲ್ಲರೂ ಕನ್ನಡಿಗರೇ, ನಮಗೆ ಇವರೆಲ್ಲರ ಮೇಲೆ ಸಾಕಷ್ಟು ಗೌರವವಿದೆ ಎಂದಿದ್ದಾರೆ.

‘ಮಹಾನ್​ ನಾಯಕ ಬಿಎಸ್​ವೈ’

ಮೇಕೆದಾಟು ಯೋಜನೆ, ಕಳಸಾ ಬಂಡೂರಿ ಯೋಜನೆ, ಕನ್ನಡಿಗರಿಗೆ ಕೆಲಸ ಸಿಗಬೇಕು, ಕರ್ನಾಟಕ ಕನ್ನಡ ಮಯವಾಗಬೇಕು ಎಂದು ಪ್ರಾಮಾಣಿಕವಾಗಿ ಸಂಘಟನೆಯನ್ನು ಕಟ್ಟಿದ್ದೇವೆ. ಕರ್ನಾಟಕದ ಬಗೆಗೆ ತುಂಬಾ ದೊಡ್ಡ ಆಸೆಯಿಟ್ಟುಕೊಂಡಿದ್ದೇವೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು, ಸರ್ಕಾರ ರಚಿಸಿದವರು ಬಿಎಸ್​ವೈ.

ಅಡ್ವಾಣಿ ಮತ್ತು ವಾಜಪೇಯಿ ಸಮಕಾಲೀನರಾಗಿ, ರೈತ ಪರ ಹೋರಾಟ ಮಾಡಿದ ಮಹಾನ್ ನಾಯಕ ಯಡಿಯೂರಪ್ಪ. ಒಮ್ಮೆ ಸರ್ಕಾರ ರಚಿಸಲು ಹೊರಟಾಗ ಪಿತೂರಿ ನಡಸಿ, ಅವರ ಪಕ್ಷದವರೇ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದರು ಎಂದು ಗಂಭೀರವಾಗಿ ದೂರಿದ್ದಾರೆ.

‘ಬಿಎಸ್​ವೈ ನೆಮ್ಮದಿಯಾಗಿರಲು ಬಿಟ್ಟಿದ್ದೀರಾ?’

ಪುನಃ ಹೋರಾಟವನ್ನು ಮಾಡಿ ಕೆಜೆಪಿ ಕಟ್ಟಿ, ಬಿಜೆಪಿಗೆ ಬಂದು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಿಸಿ ಹೋರಾಟ ಮಾಡಿ ಮುಖ್ಯಮಂತ್ರಿಯಾದರು. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್​ಗೆ ಒಂದೇ ಒಂದು ಪ್ರೆಶ್ನೆಯನ್ನು ಕೇಳುತಿದ್ದೇನೆ, ಕರ್ನಾಟಕದ ಮುಖ್ಯಮಂತ್ರಿಯಾದರೆ ನೀರಾವರಿ ಸಮಸ್ಯೆಗಳು, ಉದ್ಯೋಗದ ಸಮಸ್ಯೆಗಳು, ನೆರೆ ಪರಿಹಾರ ದೊರೆಯುತ್ತದೆ ಎಂದು ಪ್ರೀತಿಯಿಂದ ಕನ್ನಡಿಗರು ವೋಟ್ ಹಾಕಿದ್ದೇವೆ.

ನೀವು ಮಾಡುತ್ತಿರುವುದು ಏನು? ರಾಜ್ಯದಲ್ಲಿ, ದಕ್ಷಿಣ ಭಾರತದಲ್ಲಿ ನಿಮಗೆ ಸರ್ಕಾರವನ್ನು ಕೊಟ್ಟ ಯಡಿಯೂರಪ್ಪ ಕನಿಷ್ಠ ಒಂದು ದಿನ ನೆಮ್ಮದಿಯಾಗಿ ಸರ್ಕಾರ ನಡೆಸಲು ಅವಕಾಶ ಕೊಟ್ಟಿದ್ದೀರಾ ? ಕೆಲವು ಪಿತೂರಿ ಸಂಚುಗಾರರಿಂದ ಯಡಿಯೂರಪ್ಪರನ್ನು ಬದಲಾವಣೆ ಮಾಡಿ ಹೊಸಬರನ್ನು ತರಲು ಹೊರಟು ಬಿಜೆಪಿ ಮುಕ್ತ ಸರ್ಕಾರ ಮಾಡಲು ಮುಕ್ತ ಅವಕಾಶ ಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.

‘ಜಾತ್ಯತೀತ ವ್ಯಕ್ತಿ ಬಿಎಸ್​ವೈ’

ಬಿಜೆಪಿಯಲ್ಲಿ ಜಾತ್ಯತೀತ ವ್ಯಕ್ತಿ, ಎಲ್ಲಾ ಧರ್ಮಗಳ ಪರವಾಗಿರುವ ಏಕೈಕ ವ್ಯಕ್ತಿಯೆಂದರೆ ಯಡಿಯೂರಪ್ಪ. ನಾವು ಕನ್ನಡಿಗರು ಯಾವಾಗಲೂ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಕನ್ನಡ ಪರ ಸಂಘಟನೆಗಳ ಒಮ್ಮತದ ನಿರ್ಧಾರವನ್ನು ಪ್ರಕಟಿಸುತ್ತೇವೆ. ಹೈಕಮಾಂಡ್ ಸಂಸ್ಕೃತಿಯಿಂದ ಕನ್ನಡದ ನೀರಾವರಿ ಯೋಜನೆಗಳಾಗಲಿ, ಕನ್ನಡಿಗರ ಕೆಲಸಗಳಾಗಲಿ, ಯಾವುದು ಆಗುತ್ತಿಲ್ಲ, ನಮ್ಮ ನಿರೀಕ್ಷೆ ಸುಳ್ಳು ಮಾಡಿದ್ದೀರಾ ಎಂದು ಮೋದಿ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಗುಡುಗಿದ್ದಾರೆ.

ಇದನ್ನೂ ಓದಿ : ನಾಯಕತ್ವ ಬದಲಾವಣೆ ಇಲ್ಲ, ಯಾವತ್ತಿದ್ದರೂ ಬಿಎಸ್​ವೈ ನಮ್ಮ ನಾಯಕ: ರೇಣುಕಾಚಾರ್ಯ

ABOUT THE AUTHOR

...view details