ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆ ಎಷ್ಟರ ಮಟ್ಟಿಗೆ ಇದೆ ಅಂದರೆ ಅದಕ್ಕೆ ಕಣ್ಣೀರ ಕಥೆಗಳೇ ಸಾಕ್ಷಿ. ಈಗ ಇದ್ದ ವ್ಯಕ್ತಿ ಇನ್ನೊಂದು ನಿಮಿಷಕ್ಕೆ ಮೃತನಾಗುತ್ತಾನೆ ಅಂದರೆ ರೂಪಾಂತರಿ ಕೊರೊನಾದ ಉಪಟಳ ಎಷ್ಟು ಇರಬಹುದು ನೀವೇ ಊಹಿಸಿ.
ಬಿಟಿಎಂ ಲೇಔಟ್ನಲ್ಲಿ ನಡೆದಿರುವ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ. ನೂರಾರು ಕನಸು ಕಂಡಿದ್ದ ಅವರಿಬ್ಬರು ವಾರದ ಹಿಂದಷ್ಟೇ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರು. ಆದರೆ ಕ್ರೂರಿ ಕೊರೊನಾದಿಂದ ತಪ್ಪಿಸಿಕೊಳ್ಳಲು ಆಗದೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ವಾರದ ಹಿಂದೆ ಮದುವೆಯಾಗಿದ್ದ ವ್ಯಕ್ತಿ ಕೊರೊನಾಗೆ ಬಲಿ ಬಿಟಿಎಂ ಲೇಔಟ್ನ ಪಿಜಿ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೇರಳ ಮೂಲದವನಾಗಿದ್ದು, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲಸಿದ್ದಾನೆ. ಮೊದಲು ಮೈ-ಕೈ ನೋವು, ಸುಸ್ತು ಕಂಡು ಬಂದಿದೆ. ಬಳಿಕ ಕಾರಂತ್ ಆಸ್ಪತ್ರೆಗೆ ಹೋಗಿದ್ದಾರೆ. ಆಗಲೇ ಆತನ ಸ್ಯಾಚುರೇಷನ್ ಲೇವಲ್ 84%ಕ್ಕೆ ಬಂದಿತ್ತು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಪಡಿಸಿ ಮೈ-ಕೈ ನೋವಿಗೆ ಪೇನ್ ಕಿಲ್ಲರ್ ಟ್ಯಾಬ್ಲೆಟ್ ಕೊಟ್ಟು ಕಳುಹಿಸಿದ್ದಾರೆ. ಅಲ್ಲಿಂದ ಸೆಂಟ್ ಜಾನ್ಸ್ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಬೆಡ್ ಸಿಗದೆ ಮನೆಗೆ ದಂಪತಿ ವಾಪಸ್ ಆಗಿದ್ದಾರೆ.
ಟ್ಯಾಬ್ಲೆಟ್ ತೆಗೆದುಕೊಂಡು ರಾತ್ರಿ ಮಲಗಿದವ ಬೆಳಗಾಗುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ಬೆಳಗ್ಗೆ ಎದ್ದು ನೋಡಿದಾಗಲೇ ಮೃತಪಟ್ಟಿರುವುದು ತಿಳಿದು ಬಂದಿದೆ. ಪತ್ನಿಯ ಆಕ್ರಂದನ ಎಂತಹವರಿಗೂ ಅಯ್ಯೋ ಅನ್ನಿಸದೇ ಇರದು. ಇತ್ತ ಮನೆಯವರು ಕಣ್ಣೀರು ಹಾಕುತ್ತಿದ್ದು, ಶ್ವಾನ ಕೂಡ ಮಾಲೀಕನನ್ನ ಕಳೆದುಕೊಂಡು ಕುಂಯ್ ಎನ್ನುತ್ತಿತ್ತು.
ಓದಿ:ಕೊರೊನಾಗೆ ಮಗ ಬಲಿ: ಸಾವಿನ ಸುದ್ದಿ ತಿಳಿದು ಪ್ರಾಣ ಬಿಟ್ಟ ತಂದೆ-ತಾಯಿ!