ಹುಬ್ಬಳ್ಳಿ: ಹುಬ್ಬಳ್ಳಿಯ ಲವ್ ಜಿಹಾದ್ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪವನ್ನು ಪಡೆಯುತ್ತಿದೆ. ಹಿಂದೂ ಯುವತಿ, ಮುಸ್ಲಿಂ ಯುವಕನ ನಡುವೆ ನಡೆದ ಮದುವೆ ಬಗ್ಗೆ ಈಗಾಗಲೇ ಪೋಷಕರು ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆಯೇ ಇದೀಗ ಯುವತಿ ಪ್ರತ್ಯಕ್ಷವಾಗಿ ಪೋಷಕರ ಜೊತೆ ತೆರಳಲು ನಿರಾಕರಿಸಿದ್ದಾಳೆ. ಮಗಳ ನಡೆಯಿಂದ ಪೋಷಕರು ಕಣ್ಣೀರು ಹಾಕಿದ್ದಾರೆ.
ಹುಬ್ಬಳ್ಳಿಯ ಹಿಂದೂ, ಮುಸ್ಲಿಂ ಮದುವೆ ಇದೀಗ ಲವ್ ಜಿಹಾದ್ ಅನ್ನೋ ಆರೋಪವನ್ನ ಪಡೆದುಕೊಂಡಿದೆಯಾದರೂ ಯುವತಿ ಇದಕ್ಕೆ ಸ್ಪಷ್ಟನೆ ನೀಡಿದ್ದಾಳೆ. ಹಿಂದೂ ಯುವತಿ ಸ್ನೇಹಾ ಮತ್ತು ಯುವಕ ಇಬ್ರಾಹಿಂ ಈಗಾಗಲೇ ಮದುವೆ ಆಗಿದ್ದು, ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ನಿನ್ನೆ ರಾತ್ರಿಯಿಂದಲೇ ಪ್ರತಿಭಟನೆ ಹಾದಿ ಹಿಡಿದಿವೆ. ನಮ್ಮ ಮಗಳನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಮದುವೆ ಆಗಿದ್ದಾರೆ. ಇದು ಲವ್ ಜಿಹಾದ್ ಅಂತ ಪೋಷಕರು ಆರೋಪಿಸಿದ್ರೆ ಇತ್ತ ಮದುವೆ ಆಗಿರುವ ಸ್ನೇಹಾ ಮಾತ್ರ ವಿಡಿಯೋ ಮೂಲಕ ತನ್ನ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾಳೆ.
ಠಾಣೆಯಲ್ಲಿ ಯುವತಿಯ ವಿಚಾರಣೆ: ನಿನ್ನೆಯಿಂದಲೇ ಯುವತಿಯನ್ನು ಕರೆತರಬೇಕು ಅಂತ ಪೊಲೀಸರಿಗೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಡವು ನೀಡಿದ್ರು. ಇಲ್ಲದಿದ್ರೆ ಎಲ್ಲಾ ಹಿಂದೂ ಸಂಘಟನೆಗಳ ಮೂಲಕ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಇಂದು ಯುವತಿಯನ್ನು ಗೋವಾದಿಂದ ಕರೆತಂದಿರೋ ಪೊಲೀಸರು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ವಿಚಾರಣೆ ನಡೆಸಿದರು.