ಬೆಂಗಳೂರು:ರಾಷ್ಟ್ರೀಯ ಸ್ವಯಂ ಸೇವಾಸಂಘ(ಆರ್‌ಎಸ್ಎಸ್)ಕ್ಕೆ ಪರ್ಯಾಯವಾಗಿ ಸೇವಾದಳವನ್ನು ಬೆಳೆಸಲು ನೀಲ ನಕ್ಷೆ ಸಿದ್ಧವಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಲಾಲ್ ಜಿ ದೇಸಾಯಿ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಖರ ರಾಷ್ಟ್ರೀಯತೆಯ ಚಿಂತನೆಗೆ ತದ್ವಿರುದ್ಧವಾಗಿ ಸೇವೆಗೆ ಪ್ರಧಾನ ಆದ್ಯತೆ ನೀಡಿ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ನಿಟ್ಟಿನಲ್ಲಿ ಸೇವಾ ದಳ ಸಂಘಟನೆಯನ್ನು ಬಲಪಡಿಸಲು ರೂಪರೇಷೆ ಹೆಣೆಯುತ್ತಿದ್ದೇವೆ. ಈಗಾಗಲೇ ದೇಶದ ಒಂದು ಸಾವಿರ ನಗರಗಳಲ್ಲಿ ಪ್ರತಿ ತಿಂಗಳ ಕಡೆಯ ಭಾನುವಾರ ಧ‍್ವಜಾರೋಹಣ ನಡೆಸಿ ದೇಶದ ಬಹುತ್ವದ ಬಗ್ಗೆ ಚರ್ಚೆ ನಡೆಸುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೂಚನೆ ನೀಡಿದ್ದು, ಸೇವಾದಳದ ಪುನಶ‍್ಚೇತನಕ್ಕೆ ನೀಲನಕ್ಷೆ ರೂಪಿಸಿದ್ದೇವೆ ಎಂದರು.
ಆರ್‌ಎಸ್‌ಎಸ್‌ಗೆ ಟಕ್ಕರ್ ಕೊಡಲು ಸೇವಾದಳ.. ಬಿಜೆಪಿಗೆ ಪರಿವಾರವೇ ಆಧಾರ :
ರಾಷ್ಟ್ರೀಯ ಸ್ವಯಂಸೇವಾ ಸಂಘದ ಮುಖವಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತಿದ್ದು, ಸಂಘ ಪರಿವಾರದಲ್ಲಿ ವಿವಿಧ 120 ಉಪಶಾಖೆಗಳಿವೆ. ಇವುಗಳೆಲ್ಲವೂ ಪರಿವಾರದ ನಿರ್ದೇಶನದ ಮೇಲೆ ಕಾರ್ಯನಿರ್ವಹಿಸುತ್ತಿವೆ. ಬಿಜೆಪಿಯನ್ನು ದೇಶದಲ್ಲಿ ಅಧಿಕಾರಕ್ಕೆ ತರುವಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಬಿಜೆಪಿಗೆ ಪರಿವಾರವೇ ಆಧಾರವಾಗಿದೆ. ಜಾತಿ, ಧರ್ಮ, ಪ್ರಾದೇಶಿಕ, ದೇಶಭಕ್ತಿ ಇವು ಬಿಜೆಪಿ ಹಾಗೂ ಆರ್ಎಸ್ಎಸ್ನ ಕಾರ್ಯಸೂಚಿಗಳಾಗಿವೆ. ಆರ್ಎಸ್ಎಸ್ನ ಕಾರ್ಯಸೂಚಿಗಳ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕೆಲಸಕ್ಕೆ ಸೇವಾದಳ ಇನ್ಮುಂದೆ ಅಖಾಡಕ್ಕೆ ಇಳಿಯಲಿದೆ ಎಂದರು.
ಆರ್‌ಎಸ್ಎಸ್ ಹಾಗೂ ಬಿಜೆಪಿ ದೇಶದ ದಿಕ್ಕನ್ನೆ ಬದಲಾಯಿಸುತ್ತಿವೆ. ಶಿಕ್ಷಣ, ಉದ್ಯೋಗದ ಬಗ್ಗೆ ಕೇಂದ್ರದ ನಾಯಕರು ಮಾತನಾಡುತ್ತಿಲ್ಲ. ಭಾಷೆ, ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಹಾಗೂ ಬಿಜೆಪಿ ನೀಚರ ಸಂಘಟನೆಯಾಗಿದ್ದು, ದೇಶದ ಸಂವಿಧಾನವನ್ನು ಒಪ್ಪದಿರುವ ದೇಶದ್ರೋಹಿಗಳು ಎಂದು ಟೀಕಿಸಿದರು.
ಸಿದ್ಧಾಂತವೇ ಸೇವಾದಳ ಹಾಗೂ ಕಾಂಗ್ರೆಸ್ಗೆ ಆಧಾರ. ಆರ್ಎಸ್ಎಸ್ನ 120 ಉಪಶಾಖೆಗಳಲ್ಲಿ ಮಹಿಳೆಯರಿಗಾಗಲೀ, ಹಿಂದುಳಿದ ಸಮುದಾಯಕ್ಕಾಗಲೀ ಮನ್ನಣೆ ಸಿಕ್ಕಿಲ್ಲ. ಆದರೆ, ಸೇವಾದಳ ಹಾಗೂ ಪಕ್ಷದಲ್ಲಿ ಎಲ್ಲ ಜಾತಿ, ಧರ್ಮವನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ನಮ್ಮ ಸಂಖ್ಯೆ ಕಡಿಮೆ ಇದೆ. ಆದರೆ, ಪಕ್ಷ ಸಂಘಟನೆಯಲ್ಲಿ ಸೇವಾದಳದ ಹಿಂದೆ ಬಿದ್ದಿಲ್ಲ. ನಂಬರ್ ಗೇಮ್‍ನಲ್ಲಿ ಎರಡು ವರ್ಷದಲ್ಲಿ ಬಹಳ ಗಳಿಕೆಯಾಗಿದೆ. ಇಷ್ಟು ದಿನಗಳ ಕಾಲ ಸೇವಾದಳ ಸಕ್ರಿಯವಾಗಿರಲಿಲ್ಲ ಎನ್ನುವುದನ್ನು ಒಪ್ಪುತ್ತೇನೆ. ಆದರೆ, ಪರಿಸ್ಥಿತಿ ಈಗ ಮೊದಲಿನಂತಿಲ್ಲ. ಈ ಎರಡು ವರ್ಷದಲ್ಲಿ ಸೇವಾದಳದ ಸಂಘಟನೆ ಹೆಚ್ಚಿದೆ. ಪಕ್ಷಕ್ಕೆ ಬಲತುಂಬುವ ನಿಟ್ಟಿನಲ್ಲಿ ಇನ್ನುಮುಂದೆ ಬೂತ್ ಮಟ್ಟದಲ್ಲೂ ಸೇವಾದಳ ಸಕ್ರಿಯವಾಗಲಿದೆ ಎಂದರು.
ವಿಧಾನಸಭೆ ಚುನಾವಣೆಗೆ ಸಿದ್ಧತೆ :
ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಸೇವಾದಳ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ. 17 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದಲ್ಲಿ ಸೇವಾದಳ ಪಕ್ಷಕ್ಕೆ ಹೆಗಲುಗೊಟ್ಟು ದುಡಿಯಲಿದೆ. ಅನರ್ಹ ಶಾಸಕರನ್ನು ಬಿಜೆಪಿ ಖರೀದಿಸಿದ್ದು ಎಂಬುದನ್ನು ಮತದಾರರ ಮುಂದಿಡುತ್ತೇವೆ. ಅನರ್ಹರಿಗೆ ಜನಮನ್ನಣೆ ಸಿಗದಂತೆ ಪಕ್ಷ ಸಂಘಟಿಸಲು ಸೇವಾದಳ ಸಿದ್ಧತೆ ನಡೆಸಿದೆ ಎಂದು ಮಾಹಿತಿ ನೀಡಿದರು.