ಕರ್ನಾಟಕ

karnataka

ETV Bharat / state

ಬಿಬಿಎಂಪಿ ಬಜೆಟ್ 2023-24: ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶ; 9 ಕಾಮಗಾರಿಗಳಿಗೆ 965 ಕೋಟಿ ರೂ. ಹೆಚ್ಚುವರಿ ವೆಚ್ಚ

ಬೆಂಗಳೂರು ಮಹಾನಗರ ಪಾಲಿಕೆ ಇಂದು 2023-24ನೇ ಸಾಲಿಗೆ 11,157 ಕೋಟಿ ರೂ ಗಾತ್ರದ ಬಜೆಟ್​ ಮಂಡನೆ ಮಾಡಿದೆ.

BBMP
ಬಿಬಿಎಂಪಿ

By

Published : Mar 2, 2023, 5:35 PM IST

ಬೆಂಗಳೂರು: ನಗರದಲ್ಲಿ ಮುಖ್ಯವಾಗಿ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ 9 ಕಾಮಗಾರಿಗಳಿಗೆ 965 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವಾಗಲಿದ್ದು, ಈ ಹಣವನ್ನು, 770 ಕೋಟಿ ರೂ. ಗಳನ್ನು ಕೆ.ಯು.ಐ.ಡಿ.ಎಫ್.ಸಿ (ನಗರಾಭಿವೃದ್ಧಿ ಇಲಾಖೆಯ ಅಂಗ ಸಂಸ್ಥೆ) ಯಿಂದ ಸಾಲದ ರೂಪದಲ್ಲಿ ಪಡೆದು ಉಳಿದ 195 ಕೋಟಿಗಳನ್ನು ಪಾಲಿಕೆಯಿಂದಲೇ ಭರಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಪಾಲಿಕೆ ಬಜೆಟ್​ನಲ್ಲಿ ಹೇಳಿದೆ.

ಸಂಚಾರ ದಟ್ಟಣೆಯ ಹಾಗೂ ಜಂಕ್ಷನ್‌ಗಳಲ್ಲಿ ನಿಧಾನಗತಿಯ ಸಂಚಾರ ತೊಂದರೆಯನ್ನು ನಿವಾರಿಸಲು ಸಿಗ್ನಲ್ ಫ್ರೀ ಕಾರಿಡಾರ್​ಗಳನ್ನು ನಿರ್ಮಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು 2023-24 ರಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ. ಈಗಾಗಲೇ ನಗರದಲ್ಲಿ 42 ಮೇಲ್ಸೇತುವೆ ಮತ್ತು 28 ಕೆಳಸೇತುವೆಗಳಿದ್ದು, ಈ ವರ್ಷದಲ್ಲಿ ಮತ್ತೆ ನಾಲ್ಕು ಮೇಲ್ಸೇತುವೆಗಳು ಮತ್ತು ನಾಲ್ಕು ಕೆಳಸೇತುವೆಗಳು ಸೇರ್ಪಡೆಯಾಗಲಿದೆ. ಪಾದಚಾರಿ ಸುರಂಗ ಮಾರ್ಗ ಸೇರಿದಂತೆ ಸೇತುವೆಗಳ ನಿರ್ವಹಣೆಗೆ 20 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

ಎಲ್ಲೆಲ್ಲಿ ನಿರ್ಮಾಣ ಕಾಮಗಾರಿ: ಮುಖ್ಯವಾಗಿ ಗೋಕುಲ ರಸ್ತೆಯ ಮತ್ತಿಕೆರೆ ತಿರುವಿನಲ್ಲಿ ಐ.ಐ.ಎಸ್.ಸಿ. ಒದಗಿಸುತ್ತಿರುವ ಭೂಮಿಯನ್ನು ಬಳಸಿಕೊಂಡು 10 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಜಾಲಹಳ್ಳಿಯ ಬಳಿಯ ಹೊರವರ್ತುಲ ರಸ್ತೆಯ ಪೈಪ್‌ಲೈನ್ ಜಂಕ್ಷನ್‌ನಲ್ಲಿ 40 ಕೋಟಿ ರೂ. ಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯಲಿದೆ. ಮೇಕ್ರಿ ವೃತ್ತದ ಬಳಿಯ ಜಯಮಹಲ್ ರಸ್ತೆಯಲ್ಲಿ 65 ಕೋಟಿ ರೂ. ಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಸದಾಶಿವ ನಗರ ಪೊಲೀಸ್ ಸ್ಟೇಷನ್ ವೃತ್ತದಲ್ಲಿ 40 ಕೋಟಿ ರೂ. ಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಿದೆ. ಯಲಹಂಕ ರೈತ ಸಂತೆ ರಸ್ತೆಯ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೆಚ್ಚುವರಿ ಕೆಳಸೇತುವೆ ಮಾರ್ಗಗಳನ್ನು ರಚಿಸಲು ಎನ್.ಹೆಚ್.ಎ.ಐ. ಠೇವಣಿಗಾಗಿ 25 ಕೋಟಿ ರೂ. ಗಳನ್ನು ಮೀಸಲಿರಿಸಲಾಗಿದೆ.

ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಅಭಿವೃದ್ಧಿ: ಕಳೆದ ವರ್ಷ ದಾಖಲೆಯ ಮಳೆಯಿಂದ ನಗರದಲ್ಲಿ ರಸ್ತೆ ಗುಂಡಿಗಳ ತೊಂದರೆ ಸಾಕಷ್ಟು ಕಾಡಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ವ್ಯವಸ್ಥಿತವಾಗಿ, ಸರಳೀಕೃತವಾಗಿ ಹಾಗೂ ವೈಜ್ಞಾನಿಕವಾಗಿ ಕೈಗೊಳ್ಳಲು ಪಾಲಿಕೆಯು 'ಫಿಕ್ಸ್ ಮೈ ಸ್ಟ್ರೀಟ್' ಎನ್ನುವ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಿತ್ತು.

ಇದು ರಸ್ತೆ ದುರಸ್ತಿಗೊಳಿಸಲು ಆಶಾದಾಯಕವಾಗಿದ್ದು, ಈ ಆ್ಯಪ್‌ನಲ್ಲಿ ಯಾವುದೇ ನಾಗರಿಕ ತಾನು ಕಂಡ ರಸ್ತೆ ಗುಂಡಿಯ ಚಿತ್ರವನ್ನು ಜಿಯೋಟ್ಯಾಗ್‌ನೊಂದಿಗೆ ಅಪ್‌ಲೋಡ್ ಮಾಡಬಹುದಾಗಿದೆ. ಒಮ್ಮೆ ಅಪ್‌ಲೋಡ್ ಆದ ರಸ್ತೆ ಗುಂಡಿಯ ಪರಿಶೀಲನೆ, ಕಾಮಗಾರಿ, ಪರಿವೀಕ್ಷಣೆ ಹಾಗೂ ಬಿಲ್ ಸಲ್ಲಿಸುವಿಕೆ-ಪಾವತಿಯ ಕಾರ್ಯಗಳು ಆ್ಯಪ್​ ಮುಖಾಂತರವೇ ಆಗುತ್ತಿದೆ. ಪ್ರಾಯೋಗಿಕವಾಗಿ ಪ್ರಾರಂಭಿಸಿದ ಈ ಕಾರ್ಯಯೋಜನೆಯನ್ನು 2023-24ರಲ್ಲಿ ಸವಿಸ್ತಾರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಪಾಲಿಕೆ ಹೇಳಿದೆ.

ಇದನ್ನೂ ಓದಿ:₹11,157 ಕೋಟಿ ಗಾತ್ರದ ಬಿಬಿಎಂಪಿ ಬಜೆಟ್ ಮಂಡನೆ: ಮೂಲಸೌಕರ್ಯಕ್ಕೆ ಆದ್ಯತೆ, ನಾಡಪ್ರಭು ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ ಘೋಷಣೆ

ABOUT THE AUTHOR

...view details