ಬೆಂಗಳೂರು: ನಿರ್ಭಯ ಯೋಜನೆಯಡಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ 751 ದ್ವಿಚಕ್ರ ವಾಹನಗಳ ಲೋಕಾರ್ಪಣೆ ಮಾಡಲಾಯ್ತು.
751 ದ್ವಿಚಕ್ರ ವಾಹನಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಧಾನಸೌಧದ ಮುಂಭಾಗ ವಾಹನಗಳಿಗೆ ಚಾಲನೆ ನೀಡಿದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ನಿರ್ಭಯ ಯೋಜನೆಯಡಿ 751 ದ್ವಿಚಕ್ರವಾಹನಗಳನ್ನು ಪೊಲೀಸ್ ಠಾಣೆಗಳಿಗೆ ನೀಡಲಾಗುತ್ತಿದೆ. ಮಹಿಳೆಯರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಈಯೋಜನೆ ಜಾರಿಗೆ ತಂದಿದ್ದು, ಇದಕ್ಕಾಗಿ ಏಳು ಕೋಟಿ ರೂ. ನೀಡಿದೆ ಎಂದರು.
ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ರಾಜ್ಯದಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡಲು ಮತ್ತು ಮಹಿಳೆಯರ ಸುರಕ್ಷತೆಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಸಿಎಂ ಬಿಎಸ್ವೈ ಹೇಳಿದರು.