ಬೆಂಗಳೂರು: 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ.27 ರಿಂದ ಏ.1 ರ ವರೆಗೆ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಾಜ್ಯ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ ತಿಳಿಸಿದೆ. 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಈ ವಿದ್ಯಾರ್ಥಿಗಳಿಗೆ ಮಾ.13 ರಿಂದ ನಿಗದಿಪಡಿಸಿದ್ದ ಮೌಲ್ಯಾಂಕನವನ್ನು ಹೈಕೋರ್ಟ್ ಆದೇಶದಂತೆ ಮುಂದೂಡಲಾಗಿತ್ತು. ಪ್ರಸ್ತುತ ನ್ಯಾಯಾಲಯ ಮೌಲ್ಯಾಂಕನ ನಡೆಸಲು ಅವಕಾಶ ಕಲ್ಪಿಸಿದೆ.
ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆಯಾ ಶಾಲೆಗಳನ್ನು ಮೌಲ್ಯಾಂಕನ ಕೇಂದ್ರಗಳಾಗಿ ಪರಿಗಣಿಸಿದೆ. ಈ ಮೌಲ್ಯಾಂಕನವು ವಿದ್ಯಾರ್ಥಿಗಳ ಕಲಿಕಾ ಮಟ್ಟ, ನ್ಯೂನತೆ ಹಾಗೂ ಯಾವ ವಿಷಯದ ಹಿನ್ನಡೆ ಉಂಟಾಗಿದೆ ಎಂಬುದನ್ನು ತಿಳಿಯುವ ಉದ್ದೇಶ ಹೊಂದಿದೆ. ಮೌಲ್ಯಾಂಕನದಲ್ಲಿ ಯಾವುದೇ ಅನುತ್ತೀರ್ಣವಿಲ್ಲ ಎಂದು ಪರಿಷತ್ ತಿಳಿಸಿದೆ.
ಸಹಾಯವಾಣಿ:ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಣಿ ಕಾರ್ಯಕ್ರಮ ಆಯೋಜಿಸಿದೆ. ಈ ಸಹಾಯವಾಣಿಯು ಮಾ.20ರಂದ ಮಧ್ಯಾಹ್ನ 3 ಗಂಟೆಯಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿ ಸೇವಾನಿರತವಾಗಲಿದೆ.