ಬೆಂಗಳೂರು:ತಮ್ಮ ಮೇಲೆ ಕಮಿಷನ್ ಆರೋಪ ಮಾಡಿದಗುತ್ತಿಗೆದಾರರ ಸಂಘದ ಅಧ್ಯಕ್ಷ ಸೇರಿದಂತೆ ಸಂಘದ ಎಲ್ಲರ ಮೇಲೆ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬೇರೆ ಯಾರು ಅಲ್ಲ. ಇವರು ನನಗೆ 20 ವರ್ಷಗಳಿಂದ ಪರಿಚಯ. ಆದರೆ, ಅವರು ಇತ್ತೀಚೆಗೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ವಿಪಕ್ಷಗಳ ಜೊತೆ ಕೈ ಜೋಡಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೊರಟಿದ್ದಾರೆ ಎಂದು ದೂರಿದರು.
ಅಲ್ಲದೇ, ಯಾರೋ ಆರೋಪ ಮಾಡಿದ ತಕ್ಷಣ ನ್ಯಾಯಾಂಗ ತನಿಖೆ ಕೊಡಬೇಕಾ ಎಂದು ಪ್ರಶ್ನಿಸಿದ ಅವರು, ದಾಖಲೆ ಇಲ್ಲದೆ ಯಾವುದೇ ವ್ಯಕ್ತಿ ಮೇಲೆ ಆರೋಪ ಮಾಡುವ ಹಾಗಿಲ್ಲ. ನನ್ನ ಮೇಲೆ ಬಂದ ಆರೋಪದ ಬಗ್ಗೆ ನಾನು ಕೋರ್ಟ್ಗೆ ಹೋದ ಮೇಲೆ ಅವರು ದಾಖಲೆ ಕೊಡಲೇಬೇಕು. ಇಲ್ಲವೇ ನಾನು ತಪ್ಪು ಮಾಡಿದ್ದರೆ ಕೋರ್ಟ್ ಶಿಕ್ಷೆ ಕೊಡುತ್ತದೆ ಎಂದರು.
ಹದಿನಾಲ್ಕು ತಿಂಗಳಿಂದ ಗುತ್ತಿಗೆದಾರರು ಮತ್ತು ಕೆಂಪಣ್ಣ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಆದರೆ, ಇದುವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ. ನಿನ್ನೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನೆಗೆ ಕೆಂಪಣ್ಣ ಭೇಟಿ ನೀಡಿದ್ದರು. ನಂತರ ನಾನು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ಕೆಂಪಣ್ಣ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.
ಇದನ್ನೂ ಓದಿ:ಕಮಿಷನ್ ಆರೋಪ.. ಗುತ್ತಿಗೆದಾರರಿಗೆ ಮುಖ್ಯವಾದ ಸಲಹೆ ನೀಡಿದ ಕುಮಾರಸ್ವಾಮಿ