ಬೆಂಗಳೂರು: ಕಳೆದ ಒಂದು ವಾರದ ಮಳೆಯಿಂದ ರಾಜ್ಯದಲ್ಲಿ ಸುಮಾರು 80 ಸಾವಿರ ಎಕರೆ ಬೆಳೆ ಹಾನಿ ಆಗಿದ್ದು, ಅಂದಾಜು ಒಟ್ಟು 3.5-4 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವೀಗ ಕಳೆದ ವಾರದ ನಷ್ಟದ ಪರಿಹಾರದ ಜೊತೆಗೆ ಮುಂಗಡ ಪರಿಹಾರ ಕೇಳ್ತೇವೆ. ನಾವು ಒಂದು ಪಟ್ಟಿ ರೆಡಿ ಮಾಡಿದ್ದೇವೆ. ನಾವು ಸದ್ಯಕ್ಕೆ ಅಂದಾಜಿನ ಮೇಲೆ ಪರಿಹಾರ ಕೇಳುತ್ತೇವೆ. ಇನ್ನೂ ನೆರೆ ಆಗುತ್ತೆ. ಈಗಲೇ ಮಳೆ ನಿಲ್ಲುವುದಿಲ್ಲ. ಕೇಂದ್ರ ಸರ್ಕಾರ 310 ಕೋಟಿ ರೂ. ಕೊಟ್ಟಿದೆ. ಈಗ ಹೆಚ್ಚುವರಿಯಾಗಿ ಇನ್ನೂ ಪರಿಹಾರ ಕೊಟ್ಟರೆ ನಮಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ರಸ್ತೆ, ಲೈಟ್ ಕಂಬ, ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಣ ಇದೆ. ನಮ್ಮ ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ 3,500ರಿಂದ 4,000 ಕೋಟಿ ರೂ. ನಷ್ಟವಾಗಿದೆ. ಸುಮಾರು 80 ಸಾವಿರ ಎಕರೆ ಬೆಳೆ ಪ್ರವಾಹಕ್ಕೆ ತುತ್ತಾಗಿದೆ. ರಾತ್ರಿಪೂರ ಅಧಿಕಾರಿಗಳ ಜೊತೆಗೆ ಬೊಮ್ಮಾಯಿ, ನಾವು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ ಎಂದು ವಿವರಿಸಿದರು.
ಪ್ರಧಾನಿ ಅವರಿಗೆ ನಾವು ಮನವರಿಕೆ ಮಾಡಿಕೊಡುತ್ತೇವೆ. ಕೇಂದ್ರ ಸರ್ಕಾರ ಎನ್ಡಿಆರ್ಎಫ್ ನಿಯಮಗಳ ಪ್ರಕಾರ ಪರಿಹಾರ ಕೊಡುತ್ತದೆ. ಎನ್ಡಿಆರ್ಎಫ್ ನಿಯಮಗಳು ಇಡೀ ದೇಶಕ್ಕೆ ಅನ್ವಯವಾಗುತ್ತವೆ. ಕಳೆದ ಸಲವೂ ಎನ್ಡಿಆರ್ಎಫ್ ನಿಯಮದ ಪ್ರಕಾರವೇ ಕೇಂದ್ರ ಪರಿಹಾರ ಕೊಟ್ಟಿತ್ತು. ಈ ಸಲ ನಾವು ಮುಂಜಾಗ್ರತಾ ಕ್ರಮವಾಗಿ ಮುಂಚಿತವಾಗಿಯೇ ಕೇಂದ್ರದಿಂದ ಪರಿಹಾರ ಕೇಳ್ತಿದ್ದೇವೆ ಎಂದರು.
ಪಿಎಂ ಜೊತೆ ವಿಡಿಯೋ ಕಾನ್ಫರೆನ್ಸ್...
ಸಿಎಂಗಳ ಜತೆ ಪಿಎಂ ವಿಡಿಯೋ ಕಾನ್ಫರೆನ್ಸ್ ಆರಂಭಿಸಿದ್ದು, ರಾಜ್ಯದಿಂದ ಸಚಿವರಾದ ಆರ್.ಆಶೋಕ್, ಬಸವರಾಜ್ ಬೊಮ್ಮಯಿ ಭಾಗಿಯಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ವೇಳೆ ನೆರೆ ಹಾನಿ, ರಕ್ಷಣಾ ಕಾರ್ಯ, ಪರಿಹಾರ ಮೊತ್ತದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನೆರೆ ಪರಿಹಾರ ಕೊಡುವಂತೆ ರಾಜ್ಯದ ಸಚಿವರು ಪ್ರಧಾನಿಯನ್ನು ಮನವಿ ಮಾಡಲಿದ್ದಾರೆ.
ಒಟ್ಟು 6 ರಾಜ್ಯಗಳ ಜೊತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ನಡೆಯಲಿದೆ. ಕೇರಳ, ಮಹಾರಾಷ್ಟ್ರ, ಅಸ್ಸೋಂ, ಕರ್ನಾಟಕ, ಉತ್ತರಪ್ರದೇಶ, ಬಿಹಾರ ಸಿಎಂಗಳ ಜೊತೆ ಸಭೆ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕ್ಯಾಬಿನೆಟ್ ಚೀಫ್ ಸೆಕ್ರೆಟರಿ ಸೇರಿ ಐದು ರಾಜ್ಯಗಳ ಸಿಎಂಗಳು ಭಾಗವಹಿಸಲಿದ್ದಾರೆ.