ಬೆಂಗಳೂರು:ಟ್ರಾಕ್ಟರ್ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಗೋವಿಂದರಾಜು (35), ಕೆಂಪರಾಜು(22), ಬಾಲಾಜಿ (20), ಲೋಕೇಶ್ (21) ಬಂಧಿತ ಆರೋಪಿಗಳು. ಪೊಲೀಸರು ಬಂಧಿತ ಆರೋಪಿಗಳಿಂದ 12 ಲಕ್ಷ ಮೌಲ್ಯದ 2 ಟ್ರಾಕ್ಟರ್ ಹಾಗೂ 6 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.
ಗಸ್ತಿನಲ್ಲಿ ಪೊಲೀಸರು ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಆರೋಪಿಗಳ ಬಳಿ ದಾಖಲೆಗಳನ್ನು ಕೇಳಿದ್ದಾರೆ. ಈ ವೇಳೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗಳ ಬಂಧನದಿಂದ ಮಾದನಾಯಕನಹಳ್ಳಿ, ಬ್ಯಾಡರಹಳ್ಳಿ, ಬಾಗಲಗುಂಟೆಯಲ್ಲಿ ನಡೆದ ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿವೆ. ಈ ಹಿಂದೆ ಪಟ್ನಾಯಕನಹಳ್ಳಿ, ಬಡವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಡಕಾಯಿತಿ ಹಾಗೂ ಕಳ್ಳತನ ಮಾಡಿ ಕೆಂಪರಾಜು ಜೈಲಿಗೆ ಹೋಗಿದ್ದ. ಹಾಗೆಯೇ ಬಾಲಾಜಿ ತುಮಕೂರಲ್ಲಿ ಕಳ್ಳತನ ಮಾಡಿ ಜೈಲು ಪಾಲಾಗಿದ್ದ. ಇವರಿಬ್ಬರೂ ಜಾಮೀನು ಪಡೆದು ಹೊರಬಂದು ಮತ್ತೆ ಕಳ್ಳತನದ ಹಾದಿ ಹಿಡಿದಿದ್ದರು.
ಸದ್ಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.