ಬೆಂಗಳೂರು: ಕಾರು ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ಗೆ ಚಾಕು ತೋರಿಸಿ ಬೆದರಿಸಿ 32 ಲಕ್ಷದ ಮೌಲ್ಯದ ಕಿಯಾ ಕಂಪನಿಯ ಎರಡು ಕಾರುಗಳನ್ನು ಕಳ್ಳತನ ಮಾಡಿರುವ ಘಟನೆ ಯಲಹಂಕದ ಕೋಗಿಲು ರಸ್ತೆ ಬಳಿ ನಡೆದಿದೆ.
ಕಿಯಾ ಕಂಪನಿಯ ಶೋ ರೂಂನಲ್ಲಿ ಈ ಕೃತ್ಯ ನಡೆದಿದೆ. ಇಸ್ರೇಲ್ ಎಂಬಾತ ಕೆಲ ತಿಂಗಳ ಬಳಿಕ ಶೋ ರೂಂನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಇವರು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಬೈಕ್‌ನಲ್ಲಿ ಬಂದಿದ್ದ ಇಬ್ಬರು ದರೋಡೆಕೋರರು ಶೋ ರೂಂಗೆ ನುಗ್ಗಿ ಇಸ್ರೇಲ್‌ಗೆ ಚಾಕು ತೋರಿಸಿದ್ದಾರೆ. ಬಳಿಕ ಶೋ ರೂಂ ಕೀ ಕೊಡುವಂತೆ ಬೆದರಿಸಿದ್ದಾರೆ. ಆತಂಕಗೊಂಡ ಇಸ್ರೇಲ್ ಶೋ ರೂಂನ ಕೀಯನ್ನು ದರೋಡೆಕೋರರಿಗೆ ನೀಡಿದ್ದ. ಕೂಡಲೇ ಶೋ ರೂಂ ಒಳಗಿದ್ದ ಕಾರಿನ ಕೀ ಪಡೆದು ಕಿಯಾ ಕಂಪನಿಯ 13 ಲಕ್ಷ ರೂ. ಮೌಲ್ಯದ 1 ಕಾರು ಹಾಗೂ 19 ಲಕ್ಷ ರೂ. ಬೆಲೆ ಬಾಳುವ ಮತ್ತೊಂದು ಕಾರನ್ನು ಕದ್ದು ಪರಾರಿಯಾಗಿದ್ದಾರೆ.
ಇದಾದ ಬಳಿಕ ಸೆಕ್ಯೂರಿಟಿ ಗಾರ್ಡ್ ಇಸ್ರೇಲ್ ಪೊಲೀಸರಿಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದರು. ಯಲಹಂಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಶೋ ರೂಂ ಪಕ್ಕದಲ್ಲಿದ್ದ ಸಿಸಿಕ್ಯಾಮರಾಗಳಲ್ಲಿ ದರೋಡೆಕೋರರ ಕೃತ್ಯ ಸೆರೆಯಾಗಿದ್ದು, ಸದ್ಯದಲ್ಲೇ ಅವರನ್ನು ಬಂಧಿಸಲಾಗಿವುದು. ದರೋಡೆಕೋರರು ಈ ಶೋರೂಂ ಬಗ್ಗೆ ಮೊದಲೇ ತಿಳಿದುಕೊಂಡು ಸಂಚು ರೂಪಿಸಿ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.