ಬೆಂಗಗಳೂರು: ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ 24 ಸಾವಿರಕ್ಕೂ ಅಧಿಕ ಮಕ್ಕಳ ಪೈಕಿ 21,407 ಮಕ್ಳಳನ್ನು ಗುರುತಿಸಲಾಗಿದೆ. 6 ವರ್ಷದಿಂದ 14 ವರ್ಷದೊಳಗಿನ 17,266 ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ವಿಚಾರವಾಗಿ 2013ರಲ್ಲಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಶಾಲಾ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಸಲ್ಲಿಸಿದ ಪ್ರಮಾಣ ಪತ್ರವನ್ನು ಸರ್ಕಾರಿ ವಕೀಲರಾದ ಪ್ರತಿಮಾ ಹೊನ್ನಾಪುರ ಅವರು ನ್ಯಾಯಪೀಠಕ್ಕೆ ಸಲ್ಲಿಸಿದರು. 2022ರ ನ.8 ರಂದು ಹೈಕೋರ್ಟ್ ನೀಡಿರುವ ನಿರ್ದೇಶನದಂತೆ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಲು ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಗಳು ಸಮೀಕ್ಷೆ ನಡೆಸಲಾಗಿದೆ. ಸರ್ವೇಯಿಂದ ರಾಜ್ಯದಲ್ಲಿ ಒಟ್ಟು 24,308 ಮಕ್ಕಳು ಶಾಲೆಯಿಂದ ಹೊರಗುಳಿದಿರುವ ವಿಚಾರ ತಿಳಿದು ಬಂದಿತ್ತು. ಅದರಲ್ಲಿ 21,408 ಮಕ್ಕಳನ್ನು ಗುರುತಿಸಲಾಗಿದೆ. ಇನ್ನೂ 2,901 ಮಕ್ಕಳನ್ನು ಗುರುತಿಸಬೇಕಿದೆ. ವಿಳಾಸ ಮತ್ತು ಫೋನ್ ನಂಬರ್ ತಪ್ಪಾಗಿ ನೀಡಿರುವುದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 2,254 ಮಕ್ಕಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.