ಬೆಂಗಳೂರು: ನಾಲ್ಕು ರಸ್ತೆ ಸಾರಿಗೆ ನಿಗಮಗಳ ವೇತನ ಶೇ.15ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್ 1, 2023ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಪೂರ್ವ ಕಿಂಕೋ ಅಧಿಕಾರಿಗಳ/ ನೌಕರರ ವೇತನವನ್ನು ಶೇ.15 ಹೆಚ್ಚಿಸಿದೆ. ಎರಡು ದಿನಗಳ ಹಿಂದೆ ಸಿಎಂ ಬೊಮ್ಮಾಯಿ ರಸ್ತೆ ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಪರಿಷ್ಕರಿಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದರು. ಅದರಂತೆ ಇದೀಗ ಕೆಲ ನಿಬಂಧನೆಗೊಳಪಟ್ಟು ವೇತನ ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಾರಿಗೆ ನಿಗಮಗಳ ನೌಕರರ ವೇತನ ಶೇ.15ರಷ್ಟು ಹೆಚ್ಚಳ: ಆದರೆ, ಈಗಾಗಲೇ ಸಾರಿಗೆ ನೌಕರರು ಶೇ.15ರಷ್ಟು ವೇತನ ಪರಿಷ್ಕರಣೆಗೆ ಆಕ್ಷೇಪಿಸಿದ್ದು, ಮಾ.21 ರಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈಗ ರಾಜ್ಯ ಸರ್ಕಾರ ಶೇ.15ರಷ್ಟು ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ. ವೇತನ ಪರಿಷ್ಕರಣೆ ಆದೇಶ ಹೊರಡಿಸಿದ ಬಳಿಕ ಮುಷ್ಕರದ ಬಗ್ಗೆ ಸಾರಿಗೆ ನೌಕರರ ಒಕ್ಕೂಟ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.
ಪರಿಷ್ಕರಣೆಗೆ ಕೆಲ ನಿಬಂಧನೆಗೊಳಪಟ್ಟು, ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ. ಅದರಂತೆ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಅಂದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರು 31.12.2019ರಂದು ನಡೆಯುತ್ತಿದ್ದ ಮೂಲ ವೇತನವನ್ನು ಶೇ.15ರನ್ನು ಹೆಚ್ಚಿಸಿ, ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಲಾಗುವುದು.
ಪೂರ್ವ ಕಿಂಕೋ ನೌಕರರೂ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಈ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅರ್ಹ ನೌಕರರ ಉನ್ನತ ವೇತನ ಶ್ರೇಣಿಗಳನ್ನು ಮತ್ತು ಮಧ್ಯಂತರ (ಸೆಲೆಕ್ಷನ್ ಗ್ರೇಡ್) ವೇತನ ಶ್ರೇಣಿಗಳನ್ನು ಶೇ.15ರಷ್ಟು ಹೆಚ್ಚಳ ಮಾಡಿ ಪರಿಷ್ಕರಿಸಲಾಗುವುದು.