ಬೆಂಗಳೂರು: ಇಂದಿನ ಹೈಟೆಕ್ ಯುಗದಲ್ಲಿ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಸವಾಲಾಗ್ತಿದೆ. ವರ್ಷದಿಂದ ವರ್ಷಕ್ಕೆ ಬೆಂಗಳೂರು ಮಹಾನಗರದಲ್ಲಿ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿವೆ. ವಿವಿಧ ಆಸೆ - ಆಮಿಷವೊಡ್ಡಿ ಮುಗ್ದ ಜನರನ್ನು ನಂಬಿಸಿ ಸೈಲೆಂಟ್ ಆಗಿಯೇ ಕೋಟ್ಯಂತರ ರೂಪಾಯಿ ಹಣವನ್ನು ಆನ್‌ಲೈನ್ ಖದೀಮರು ದರೋಡೆ ಮಾಡುತ್ತಿದ್ದಾರೆ. ಇಂತಹ ಸ್ಮಾರ್ಟ್ ಕ್ರೈಂಗೆ ತಕ್ಕಮಟ್ಟಿಗಾದರೂ ತಹಬದಿ ಹಾಕಲು ಜಾರಿ ತಂದಿದ್ದ ಗೋಲ್ಡನ್ ಅವರ್ಸ್ ಯೋಜನೆ ಫಲಪ್ರದವಾಗಿದೆ.
ಅಮಾಯಕ ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಳ್ಳುವ ವಂಚಕರು ಇದ್ದ ಜಾಗದಲ್ಲಿಯೇ ತಂತ್ರಜ್ಞಾನ ನೆರವಿನಿಂದ ಕೋಟ್ಯಂತರ ರೂಪಾಯಿ ಎಗರಿಸುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಹಿಂದಿನ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್ ಅವರು 2020ರಲ್ಲಿ ಗೋಲ್ಡನ್ ಅವರ್ಸ್ ಯೋಜನೆ ಜಾರಿಗೆ ತಂದಿದ್ದರು. ಹಣ ಕಳೆದುಕೊಂಡ ಜನರು ಕೂಡಲೇ ಪೊಲೀಸರಿಗೆ ದೂರು ನೀಡಬೇಕು. ಆಗ ಪೊಲೀಸರು ವಿವರ ಸಂಗ್ರಹಿಸಿ ಸಂಬಂಧಪಟ್ಡ ಬ್ಯಾಂಕ್ಗಳಿಗೆ ಕಳುಹಿಸಿ ಅಲ್ಲಿಂದ ವರ್ಗಾವಣೆಯಾದ ಖದೀಮರ ಬ್ಯಾಂಕ್ ಅಕೌಂಟ್ ಜಪ್ತಿ ಮಾಡುವುದೇ ಯೋಜನೆ ಉದ್ದೇಶವಾಗಿದೆ.
2020ರ ಡಿಸೆಂಬರ್ನಲ್ಲಿ ಜಾರಿಯಾಗಿದ್ದ ಈ ಯೋಜನೆಯು ಇದುವರೆಗೂ 12,126 ದೂರುಗಳು ಬಂದಿದೆ. ಈ ಪೈಕಿ 11,200 ದೂರುಗಳನ್ನು ಇತ್ಯರ್ಥ ಮಾಡಲಾಗಿದ್ದು 904 ದೂರುಗಳು ತನಿಖಾ ಹಂತದಲ್ಲಿವೆ. ದಾಖಲಾದ ದೂರುಗಳ ಆಧಾರದ ಮೇರೆಗೆ ಸುಮಾರು 104 ಕೋಟಿ ಹಣ ಕಳೆದುಕೊಂಡಿದ್ದು, ಇದರಲ್ಲಿ 15 ಕೋಟಿ ರೂ.ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತನಿಖೆ ಮುಕ್ತಾಯ ಬಳಿಕ ವಾರಸುದಾರರು ಕೋರ್ಟ್ಗೆ ಸೂಕ್ತ ದಾಖಲಾತಿ ನೀಡಿ ಹಣ ಪಡೆದುಕೊಳ್ಳಬಹುದಾಗಿದೆ.
ಓದಿ:ಏರ್ಲೈನ್ಸ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಯುವತಿಗೆ ವಂಚನೆ