ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸೋಂಕಿನಿಂದ 4 ಸಾವನ್ನಪ್ಪಿದ್ದರೆ, 25 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಸಮಾಧಾನದ ಸಂಗತಿ ಎಂದರೆ, ರಾಜ್ಯದ 30 ಜಿಲ್ಲೆಗಳಲ್ಲಿ 12 ಜಿಲ್ಲೆಗಳು ಕೊರೊನಾದಿಂದ ಮುಕ್ತವಾಗಿದೆ. ಇದುವರೆಗೂ ಒಟ್ಟು 12 ಜಿಲ್ಲೆಗಳಲ್ಲಿ ಒಂದೇ ಒಂದು ಸೋಂಕಿನ ಪ್ರಕರಣ ವರದಿಯಾಗಿಲ್ಲ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಕೊರೊನಾ ಪ್ರಕರಣಗಳು:ಬೆಂಗಳೂರು- 62, ಬೆಂಗಳೂರು ಗ್ರಾಮಾಂತರ -3, ಮೈಸೂರು -35, ಬೀದರ್ -10, ಚಿಕ್ಕಬಳ್ಳಾಪುರ-7, ದಕ್ಷಿಣ ಕನ್ನಡ -12, ಉತ್ತರ ಕನ್ನಡ -8, ಕಲಬುರಗಿ -5, ದಾವಣಗೆರೆ -3, ಉಡುಪಿ -3, ಬೆಳಗಾವಿ -7, ಬಳ್ಳಾರಿ -6, ಕೊಡಗು-1, ಧಾರವಾಡ-1, ತುಮಕೂರು - 1, ಬಾಗಲಕೋಟೆ-5, ಮಂಡ್ಯ-3, ಗದಗ-1
ಕೊರೊನಾ ''ಹರಡಿದ್ದರ'' ಬಗ್ಗೆ ಅನುಮಾನ..!:ಇಂದು ಕೊರೊನಾ ದೃಢಪಟ್ಟಿರುವ 166 ಮತ್ತು 175ನೇ ಸೋಂಕಿತರಿಗೆ ಹೇಗೆ ರೋಗ ಹರಡಿದೆ ಎಂಬುದು ಇಂದಿಗೂ ತಿಳಿದುಬಂದಿಲ್ಲ. ಇದರ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ''ಗದಗ ಮತ್ತು ಕಲಬುರಗಿ ರೋಗಿಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ರು. ಅವರಿಗೆ ಸೋಂಕು ಹೇಗೆ ತಗುಲಿದೆ ಎನ್ನುವುದರ ಶೋಧಕಾರ್ಯ ಮಾಡುತ್ತಿದ್ದೇವೆ. ಇಬ್ಬರಿಗೂ ಸಾರ್ಸ್ ಇತ್ತು. ಉಸಿರಾಟದ ಸಮಸ್ಯೆ ಇರುವವರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ. ಹಾಗೇ ಇವರಿಗೂ ಪರೀಕ್ಷಿಸಿದಾಗ ಕೊರೊನಾಗೆ ಪಾಸಿಟಿವ್ ರಿಸಲ್ಟ್ ಬಂದಿದೆ. ಇವರಿಬ್ಬರ ಬಗ್ಗೆ ಮತ್ತಷ್ಟು ವಿವರ ಪಡೆಯಲಾಗುತ್ತಿದೆ'' ಎಂದು ತಿಳಿಸಿದ್ದಾರೆ.
ಶಾಬ್- ಎ- ಬರಾತ್ ಪ್ರಾರ್ಥನೆ ಸಭೆ ನಿಲ್ಲಿಸಲು ನಿರ್ಧಾರ
ಕೊರೊನಾ ಮಹಾಮರಿಯ ಕಾರಣಕ್ಕೆ ಲಾಕ್ಡೌನ್ ಮಾಡಲಾಗಿದ್ದು, ಕರ್ನಾಟಕ ವಕ್ಫ್ ಮಂಡಳಿ ಮತ್ತು ಮುಸ್ಲಿಂ ಸಮುದಾಯದ ಮುಖಂಡರ ನಿರ್ಧಾರದಂತೆ, ಏಪ್ರಿಲ್ 9ರಂದು ನಡೆಯಬೇಕಿದ್ದ ಶಾಬ್-ಎ-ಬರಾತ್ ಪ್ರಾರ್ಥನಾ ಸಭೆಯನ್ನು ನಿಲ್ಲಿಸಲಾಗುತ್ತಿದೆ. ರಾತ್ರಿ ಪ್ರಾರ್ಥನೆ, ಸಮಾಧಿ ಸ್ಥಳಕ್ಕೆ ಭೇಟಿ, ಮಸೀದಿಗೆ ಹೋಗುವುದು ಎಲ್ಲವನ್ನೂ ವಕ್ಫ್ ಬೋರ್ಡ್ ರದ್ದು ಮಾಡಿದೆ.
ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡವರ ಸ್ಯಾಂಪಲ್ ಸಂಗ್ರಹ:ಇನ್ನು ದೆಹಲಿಯ ನಿಜಾಮುದ್ದೀನ್ನ್ ತಬ್ಲಿಘಿ ಜಮಾತ್ನಲ್ಲಿ ಭಾಗಿಯಾದವರಲ್ಲಿ ಇಲ್ಲಿಯವರೆಗೆ 920 ಜನರ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಅದರಲ್ಲಿ 623 ಜನರ ವರದಿ ನೆಗೆಟಿವ್ ಬಂದಿದೆ. ಇಲ್ಲಿಯವರೆಗೆ 27 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 270 ಮಂದಿಯ ವರದಿಯನ್ನು ನಿರೀಕ್ಷಿಸಲಾಗಿದೆ.
ಕೊರೊನಾ ವಿರುದ್ಧ ಸರ್ಕಾರದ ಸಿದ್ಧತೆ ಹೇಗಿದೆ ಗೊತ್ತಾ..?:ರಾಜ್ಯದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಹಿನ್ನೆಲೆಯಲ್ಲಿ ಆಸ್ಪತ್ರೆ, ಐಸಿಯು ಬೆಡ್, ಐಸೋಲೇಷನ್ ಬೆಡ್, ಲ್ಯಾಬ್ಗಳ ಸಂಖ್ಯೆಯನ್ನು ಸರ್ಕಾರ ಹೆಚ್ಚಳ ಮಾಡಿದೆ.. ಐಸೋಲೇಷನ್ ಬೆಡ್ಗಳ ಸಂಖ್ಯೆ ಈ ಮೊದಲು 2,419ರಷ್ಟಿದ್ದು, ಈಗ 1,540 ಹೊಸ ಐಸೋಲೇಷನ್ ಬೆಡ್ಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಐಸೋಲೇಷನ್ ಬೆಡ್ಗಳ ಸಂಖ್ಯೆ 3,959 ರಷ್ಟಿದೆ. ಐಸಿಯು ಬೆಡ್ಗಳ ಸಂಖ್ಯೆ ಈ ಹಿಂದೆ 250 ಇದ್ದು, ಈಗ 494ಕ್ಕೆ ಏರಿಕೆ ಮಾಡಲಾಗಿದೆ. ಲ್ಯಾಬ್ಗಳ ಸಂಖ್ಯೆ 10ರಿಂದ 11ಕ್ಕೆ ಏರಿಸಲಾಗಿದೆ.
ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಸದ್ಯಕ್ಕಿಲ್ಲ ನಿರ್ಧಾರ:ಮುಂದಿನ ದಿನಗಳಲ್ಲಿ ರೋಗಿಗಳ ಸಂಖ್ಯೆ ಮತ್ತು ಸೋಂಕಿನ ತೀವ್ರತೆಯನ್ನು ಗಮನಿಸಲಾಗುವುದು. ಇದಕ್ಕಾಗಿ ಡಾ.ದೇವಿ ಶೆಟ್ಟಿ, ಡಾ. ಮಂಜುನಾಥ್ ಮುಂತಾದ ತಜ್ಞ ವೈದ್ಯರು ಇರುವ ತಂಡವಿದೆ. ಸೋಂಕಿನ ತೀವ್ರತೆಯ ಕುರಿತು ಅವರು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡುತ್ತಾರೆ. ಲಾಕ್ ಡೌನ್ ಮುಂದುವರೆಯಬೇಕಾ? ಇಲ್ಲವಾ? ಎನ್ನುವುದರ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಚಿಂತಿಸಿಲ್ಲ, ಅದಕ್ಕಿನ್ನೂ ಸಮಯವಿದೆ ಅಂತ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್ ತಿಳಿಸಿದ್ದಾರೆ..