ಬೆಂಗಳೂರು:ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಆರೋಗ್ಯ ಹಾಗೂ ವಸತಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ನೀಡಲು ಇನ್ನಷ್ಟು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
'ಪೊಲೀಸ್ ಸಂಸ್ಮರಣೆ ದಿನಾಚರಣೆ' ನಿಮಿತ್ತ ನಗರದ ಚಿತ್ರಕಲಾ ಪರಿಷತ್ನಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಅಮರವೀರರ ಭಾವಚಿತ್ರ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪರಾಧ ಪ್ರಕರಣ ತಗ್ಗಿಸಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಅವಿರತವಾಗಿ ಶ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಪೊಲೀಸರ ತ್ಯಾಗ, ಶೌರ್ಯ ಅಮೋಘ. ಅಹಿತಕರ ಘಟನೆ ವೇಳೆ ಪೊಲೀಸರ ಕಾರ್ಯ ನಿರ್ವಹಿಸುವ ರೀತಿ ಶ್ಲಾಘನೀಯ ಎಂದ್ರು.
ಕಳೆದ ವರ್ಷ ಕೆ.ಜಿ.ಹಳ್ಳಿ ಹಾಗೂ ಡಿ.ಜಿ.ಹಳ್ಳಿ ಗಲಭೆ ಸೇರಿದಂತೆ ಅಹಿತರ ಘಟನೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಹತೋಟಿಗೆ ತಂದು ಉತ್ತಮವಾಗಿ ಕೆಲಸ ಮಾಡಿರುವುದು ನೋಡಿದ್ದೇನೆ.
ನಾನು ಸಚಿವನಾಗುವುದಕ್ಕೂ ಮುನ್ನ ಎರಡೂವರೆ ತಿಂಗಳ ಹಿಂದೆ ಪೊಲೀಸರ ಜೊತೆ ಹೋರಾಟ ನೆಪದಲ್ಲಿ ಘರ್ಷಣೆಗೆ ಇಳಿಯುತ್ತಿದ್ದೆ. ಆಗ ಪೊಲೀಸರ ಕಾರ್ಯ ವೈಖರಿ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಗೃಹ ಸಚಿವರಾದ ಬಳಿಕ ಪೊಲೀಸ್ ಕಾರ್ಯಶೈಲಿ ಬಗ್ಗೆ ಹತ್ತಿರದಿಂದ ನೋಡಿದ್ದೇನೆ. ಪೊಲೀಸರ ಕೆಲಸ ಸುಲಭವಲ್ಲ. ಅವರಿಗೆ ನೀಡುತ್ತಿರುವ ಸಂಬಳ, ಸೌಕರ್ಯ ಯಾವುದಕ್ಕೂ ಸಾಲದು ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲ ಪೊಲೀಸರಿಗೂ ಮನೆ; 10 ಸಾವಿರ ಕೋಟಿ ಮೀಸಲು
ಪೊಲೀಸರು ಈಗಲೂ ಹಳೆಯ ಹಾಗೂ ಶಿಥಿಲಾವಸ್ಥೆಯ ಕಟ್ಟಡದಲ್ಲಿ ವಾಸ ಮಾಡುತ್ತಿದ್ದಾರೆ.ಅವರಿಗೆ ಉತ್ತಮ ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 11 ಸಾವಿರ ಮನೆ ಕಟ್ಟಲಾಗಿದೆ. 2025ರೊಳಗೆ ಎಲ್ಲಾ ಪೊಲೀಸರಿಗೂ ಮನೆ ನಿರ್ಮಿಸಲು ಗುರಿ ಹೊಂದಲಾಗಿದೆ. ಈ ಸಂಬಂಧ 10 ಸಾವಿರ ಕೋಟಿ ಮೀಸಲಿರಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಸುಮಾರು 20ರಷ್ಟು ಮಹಿಳಾ ಪೊಲೀಸರಿದ್ದಾರೆ. ಶೇ.25 ರಷ್ಟು ಮಹಿಳಾ ಪೊಲೀಸರ ನೇಮಕಾತಿಗೆ ಅವಕಾಶ ನೀಡಲಾಗಿದೆ. ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲು ಹಾಗೂ ನೂತನ ಕಟ್ಟಡ ನಿರ್ಮಾಣಕ್ಕಾಗಿ ಈ ವರ್ಷ 200 ಕೋಟಿ ಮೀಸಲಿಡಲಾಗಿದೆ. ಪ್ರಸ್ತಕ ವರ್ಷದಲ್ಲಿ 100 ಹೊಸ ಪೊಲೀಸ್ ಠಾಣೆಯ ಕಟ್ಟಡ ನಿರ್ಮಿಸುವ ಗುರಿ ಹೊಂದಲಾಗಿದೆ.
ಬೆಟ್ಟಿಂಗ್ ಮಾಫಿಯಾ ತಡೆಗೆ ಹೊಸ ಕಾನೂನು
ಬೆಟ್ಟಿಂಗ್ ಮಾಫಿಯಾ ತಡೆಗಟ್ಟಲು ರಾಜ್ಯದಲ್ಲಿ ಆನ್ಲೈನ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಹೊಸ ಕಾಯ್ದೆ ರೂಪಿಸಲಾಗಿದೆ. ತ್ವರಿತ ತನಿಖೆಗಾಗಿ ಎಫ್ಎಸ್ ಎಲ್ ಹೆಚ್ಚಿನ ಸಂಖ್ಯೆಯಲ್ಲಿ ತಜ್ಞರ ನೇಮಕಾತಿಗೆ ಮಾಡಿ ತರಬೇತಿ ನೀಡಲಾಗುತ್ತಿದೆ ಎಂದರು.
ಇದಕ್ಕೂ ಮುನ್ನ ಡಿಜಿ ಪ್ರವೀಣ್ ಸೂದ್ ಮಾತನಾಡಿ, ಕೊರೊನಾ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಲ್ಲಿ 172 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ. ಕಳೆದ ವರ್ಷದಿಂದ ಪೊಲೀಸರ ಸ್ಮರಾಂಜಲಿ ದಿನಾಚರಣೆ ಆಚರಿಸಲಾಗುತ್ತಿದೆ. ಚಿತ್ರಕಲಾ ಪರಿಷತ್ನಲ್ಲಿ ಮೂರು ದಿನಗಳ ಕಾಲ ಪೊಲೀಸ್ ಅಮರವೀರರ ಭಾವಚಿತ್ರ ಪ್ರದರ್ಶನ ನಡೆಯಲಿದೆ.
ಮೂರು ದಿನಗಳ ಬಳಿಕ ಪ್ರತಿ ಎಸ್ಪಿ ಕಚೇರಿ ಬಳಿ ಹೋಗಿ ಭಾವಚಿತ್ರ ಪ್ರದರ್ಶನ ನಡೆಯಲಿದೆ. ಅಂತಿಮವಾಗಿ ಕುಟುಂಬಸ್ಥರಿಗೆ ಮಡಿದವರ ಭಾವಚಿತ್ರಗಳನ್ನ ಹಸ್ತಾಂತರ ಮಾಡಲಿದ್ದೇವೆ ಎಂದರು.