ಬೆಂಗಳೂರು: ಮೇ 31ರೊಳಗೆ ಪ್ರತಿ ದಿನ 10 ಸಾವಿರ ಕೊರೊನಾ ಪರೀಕ್ಷೆ ನಡೆಸುವ ಸಾಮರ್ಥ್ಯ ಹಾಗೂ 60 ಪ್ರಯೋಗಾಲಯ ಹೊಂದುವ ಗುರಿಯನ್ನು ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳಿಗೂ ನೀಡಿತ್ತು. ಇದೀಗ ಕರ್ನಾಟಕ ರಾಜ್ಯ ಸರ್ಕಾರ ಇದನ್ನು ಸಾಧಿಸಿದ್ದು, ಈ ಗುರಿಯನ್ನು ತಲುಪಿದ ಮೊದಲ ರಾಜ್ಯವಾಗಿ ಹೊರ ಹೊಮ್ಮಿದೆ.
ಕೊರೊನಾ ಪರೀಕ್ಷೆಯಲ್ಲಿ ಅವಧಿಗೆ ಮುನ್ನವೇ ರಾಜ್ಯ ಗುರಿ ತಲುಪಿದೆ: ಸಚಿವ ಸುಧಾಕರ್
ಪ್ರತಿ ದಿನ 10 ಸಾವಿರ ಕೊರೊನಾ ಪರೀಕ್ಷೆ ನಡೆಸುವ ಸಾಮರ್ಥ್ಯ ಹಾಗೂ 60 ಪ್ರಯೋಗಾಲಯಗಳನ್ನು ಹೊಂದುವ ಕೇಂದ್ರದ ಗುರಿಯನ್ನು ಸಾಧಿಸಿದ ಮೊದಲ ರಾಜ್ಯವಾಗಿ ಕರ್ನಾಟಕ ಹೊರ ಹೊಮ್ಮಿದೆ.
ಕೊರೊನಾ ಸೋಂಕು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಹೆಚ್ಚು ಕೊರೊನಾ ಪರೀಕ್ಷೆ ನಡೆಯಬೇಕು. ಕಡಿಮೆ ಸಮಯದಲ್ಲಿ ಫಲಿತಾಂಶ ಪ್ರಕಟಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಪ್ರತಿ ರಾಜ್ಯಕ್ಕೂ ಕೇಂದ್ರ ಸರ್ಕಾರ ಗುರಿ ನೀಡಿತ್ತು. ಮೇ ಅಂತ್ಯದೊಳಗೆ ಪ್ರತಿ ದಿನ 10 ಸಾವಿರ ಕೊರೊನಾ ಪರೀಕ್ಷೆ ನಡೆಸುವ ಸಾಮರ್ಥ್ಯ ಪಡೆಯಬೇಕು. ರಾಜ್ಯಗಳಲ್ಲಿ 60 ಲ್ಯಾಬ್ ಇರಬೇಕು ಎನ್ನುವ ಗುರಿ ನಿಗದಿಪಡಿಸಲಾಗಿತ್ತು. ಕೇಂದ್ರ ನೀಡಿದ್ದ ಈ ಟಾಸ್ಕ್ನಂತೆ ಪ್ರತಿ ದಿನ 10 ಸಾವಿರ ಕೊರೊನಾ ಪರೀಕ್ಷೆ ನಡೆಸುವ ಸಾಮರ್ಥ್ಯವನ್ನು 10 ದಿನ ಮೊದಲೇ ಪಡೆದುಕೊಂಡಿದ್ದ ಕರ್ನಾಟಕ ಇದೀಗ ಮೂರು ದಿನ ಮೊದಲೇ 60 ಲ್ಯಾಬ್ ಹೊಂದುವ ಮೂಲಕ ಕೇಂದ್ರ ನೀಡಿದ್ದ ಗುರಿ ಇತರ ರಾಜ್ಯಗಳಿಗಿಂತ ಮೊದಲೇ ತಲುಪಿದೆ.
ಈ ಕುರಿತು ಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಅವಧಿಗೂ ಮುನ್ನ ಗುರಿ ತಲುಪಿದ್ದೇವೆ. ಮೇ 31ರೊಳಗೆ 60 ಲ್ಯಾಬ್‌ಗಳನ್ನು ಹೊಂದುವಂತೆ ಕೇಂದ್ರ ಸರ್ಕಾರ ನೀಡಿದ ಗುರಿಯನ್ನು ತಲುಪಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ರಾಜ್ಯದ 60ನೇ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಬೆಂಗಳೂರಿನ ಕಿಮ್ಸ್ನಲ್ಲಿ ಇಂದು ಪ್ರಾರಂಭವಾಗಲಿದೆ. ಈ ಸಾಧನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅಧಿಕಾರಿಗಳಿಗೆ ಧನ್ಯವಾದಗಳು ಎಂದಿದ್ದಾರೆ.