ಬೆಂಗಳೂರು: ಕೊರೊನಾ 2ನೇ ಅಲೆ ಮುನ್ಸೂಚನೆ ಹಿನ್ನೆಲೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಸಭೆ ಮಾಡಿ ಕೆಲ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ರೋಗಿಗಳಿಗಾಗಿ ಸುಮಾರು 1000 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಮನೆಯ ಹಿರಿಯರನ್ನು ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹಾಗೂ ಆಸ್ಪತ್ರೆಗೆ ಕರೆದೊಯ್ಯಲು ಸುಮಾರು 200 ಆಂಬುಲೆನ್ಸ್ಗಳನ್ನು ಮೀಸಲಿಡಲಾಗಿದ್ದು, ಇದಕ್ಕಾಗಿ ನರ್ಸಿಂಗ್, ಅರೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಹಾಗೆಯೇ ಖಾಸಗಿ ಆಸ್ಪತ್ರೆ ಮಾಲೀಕರ ಜತೆ ಅಪರ ಮುಖ್ಯ ಕಾರ್ಯದರ್ಶಿಗಳು ಸಭೆ ಮಾಡಲಿದ್ದು, ವೈದ್ಯಕೀಯ ಕಾಲೇಜಿನ ಜತೆ ಸಹ ಮಾತುಕತೆ ನಡೆಸಿ 15 ದಿನದಲ್ಲಿ ಜವಾಬ್ದಾರಿ ನಿಭಾಯಿಸುವ ಅನಿವಾರ್ಯ ಎದುರಾದರೆ ಸಿದ್ಧವಾಗುವಂತೆ ಮನವಿ ಮಾಡಲಿದ್ದೇವೆ ಎಂದರು.
ಮೊದಲ ಹಂತವನ್ನ ಯಶಸ್ವಿಯಾಗಿ ನಿಭಾಯಿಸಿದ್ದೇವೆ. 2ನೇ ಅಲೆ ಬರಬಹುದು ಎಂದು ಎಲ್ಲಾ ಸಿದ್ಧತೆ ಕೈಗೊಂಡಿದ್ದೇವೆ. ಜನ ಸಾಧ್ಯವಾದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಬೇಕು. ವ್ಯಾಕ್ಸಿನ್ ಹಾಕಿಸಿಕೊಂಡ ಮಾತ್ರಕ್ಕೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆಯಬಾರದು. ಎಲ್ಲರು ತಪ್ಪದೇ ಕೋವಿಡ್ ನಿಯಮಾವಳಿ ಅನುಸರಿಸಬೇಕು. ಸಂಪೂರ್ಣ ರೋಗ ಮುಕ್ತರಾಗುವವರೆಗೂ ಜಾಗ್ರತೆ ವಹಿಸಿ. ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಂಡಿದೆ. ಮುಂದಿನ 50 ದಿನ ನಾನೂ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಯಾರಿಗೂ ರಜೆ ಇಲ್ಲ. ನಿರಂತರವಾಗಿ ಕಾರ್ಯನಿರ್ವಹಿಸೋಣ ಎಂದು ಕರೆ ನೀಡಿದರು.