ರೈತರಿಂದ ಕನಿಷ್ಠ ಬೆಂಬಲ ಬೆಲೆ ಕೊಟ್ಟು ರಾಗಿ ಖರೀದಿ. ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) :ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರೈತರಿಂದ ರಾಗಿ ಖರೀದಿಯನ್ನು ಮಾಡಲಾಗುತ್ತಿದೆ. ಈ ಹಿನ್ನಲೆ ನೋಂದಾಯಿತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗೋದಾಮುಗಳಿಗೆ ಬರುತ್ತಿದ್ದು, ಕಿಲೋಮೀಟರ್ ಗಟ್ಟಲೆ ಟ್ರ್ಯಾಕ್ಟರ್ಗಳು ಸಾಲುಗಟ್ಟಿ ನಿಂತಿವೆ. ಇದರಿಂದ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮೋಹನಕುಮಾರಿ ರೈತರ ಸಮಸ್ಯೆಗಳನ್ನು ಅಲಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಗುಂಡುಂಗೆರೆ ಕ್ರಾಸ್ ಬಳಿಯ ಇರುವ ಕರ್ನಾಟಕ ರಾಜ್ಯ ಉಗ್ರಣ ನಿಗಮದ ಗೋದಾಮುಗಳಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಿದ ರಾಗಿಯನ್ನು ದಾಸ್ತಾನು ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನ ರೈತರು ಸೇರಿದಂತೆ ನೆಲಮಂಗದ ರೈತರು ಸಹ ರಾಗಿ ದಾಸ್ತಾನು ಮಾಡಲು ಗೋದಾಮುಗಳಿಗೆ ಬರುತ್ತಿದ್ದಾರೆ.
ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕ-ಪಕ್ಕ ಜಿಲ್ಲೆಗಳಿಂದ ರೈತರು ಬರುತ್ತಿರುವುದರಿಂದ ದಟ್ಟನೆ ಉಂಟಾಗಿದೆ. ರಾಗಿ ದಾಸ್ತಾನು ಮಾಡಲು ಬರುವ ರೈತರು ಎರಡರಿಂದ ಮೂರು ದಿನ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು, ಈ ಮಾಹಿತಿ ತಿಳಿದು ಜಿಲ್ಲಾಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು. ರೈತರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಮತ್ತು ಕಾರ್ಮಿಕರ ಸಂಖ್ಯೆ ಹೆಚ್ಚಿಸುವಂತೆ ಸೂಚನೆ ನೀಡಿದರು.
ಸ್ಥಳಕ್ಕೆ ತಹಶೀಲ್ಧಾರ್ ಭೇಟಿ :ತಹಶೀಲ್ದಾರ್ ಮೋಹನಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಸೂಚನೆಯಂತೆ ರಾಗಿ ದಾಸ್ತಾನು ಮಾಡಲು 50ಕ್ಕೂ ಹೆಚ್ಚು ಕಾರ್ಮಿಕರನ್ನ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ರೈತರು ಬಂದಲ್ಲಿ ಇನ್ನೂ 30ಕ್ಕೂ ಹೆಚ್ಚು ಕಾರ್ಮಿಕರನ್ನು ತೆಗೆದುಕೊಳ್ಳಲಾಗುವುದು. ಸದ್ಯ 8 ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ದಿನಕ್ಕೆ 300 ರೈತರಿಂದ ರಾಗಿ ಖರೀದಿಯ ದಾಸ್ತಾನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ರೈತರಿಂದ ರಾಗಿ ಖರೀದಿ ಮಾಡುತ್ತಿರುವ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ನಡೆಯುತ್ತಿದೆ. ಆದರೇ ರೈತರು ನೋಂದಾಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ರಾಗಿ ಖರೀದಿ ಕೇಂದ್ರವು, ಖರೀದಿ ದಿನಾಂಕವನ್ನು ಕೊಟ್ಟಿದ್ದಾರೆ. ಆದರೆ ರೈತರು ಎಲ್ಲಿ ತಾವು ಬೆಳೆದ ಬೆಳೆಯನ್ನು ಖರೀದಿ ಮಾಡೋದಿಲ್ಲವೋ ಎಂದು ಭಯ ಬೀತರಾಗಿ ಇನ್ನೂ ಒಂದು ವಾರ ಸಮಯವಿದ್ದರೂ ಮುಂಚಿತಾವಾಗಿ ಬರುತ್ತಿದ್ದಾರೆ ಎಂದರು.
ರೈತರು ನೋಂದಾಣಿ ಮಾಡಿಕೊಂಡ ದಿನದಂದ್ದು ರಾಗಿ ಖರೀದಿ ಕೇಂದ್ರಕ್ಕೆ ಬರುವ ದಿನವನ್ನು ನೀಡಲಾಗಿದೆ ಅಂದೇ ರಾಗಿ ಖರೀದಿಗೆ ಬರಬೇಕು. ಎಲ್ಲಾ ರೈತರು ಒಮ್ಮಲೇ ಬರುತ್ತಿರುವುದರಿಂದ ದಟ್ಟನೆ ಉಂಟಾಗಿದೆ ಎಂದರು. ಈ ದಟ್ಟನೆಯನ್ನು ತಪ್ಪಿಸಲು ಇನ್ನೂ 30 ಜನರನ್ನು ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಕರೆ ತರಲಾಗುವುದು. ಆದರಿಂದ ರಾಗಿ ಖರೀದಿಗೆ ಮಾರ್ಚ್ 31ರ ವರೆಗೂ ಸಮಯ ಇರುವುದರಿಂದ ರೈತರು ಸಾವದಾನದಿಂದ ವರ್ತಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ :ನೇಕಾರರಲ್ಲದವರ ದಾಖಲೆ ನೀಡಿದಲ್ಲಿ ಪಟ್ಟಿಯಿಂದ ತೆಗೆಯಲಾಗುವುದು : ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕಿ ಸೌಮ್ಯ