ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಆಟವಾಡಲು ಕೆರೆಗಿಳಿದಿದ್ದ ಮೂವರು ಬಾಲಕರು ನೀರು ಪಾಲಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಅಮಾನಿಕೆರೆಯಲ್ಲಿ ನಿನ್ನೆ (ಶನಿವಾರ) ಮಧ್ಯಾಹ್ನ ನಡೆದಿದೆ. ವಿಜಯಪುರ ಪಟ್ಡಣದ ಕಾರ್ತಿಕ್ (16), ಧನುಷ್ (15) ಮತ್ತು ಗುರುಪ್ರಸಾದ್ (6) ಮೃತರು. ಮಕ್ಕಳು ಸಂಜೆಯಾದರೂ ಮನೆಗೆ ಬಾರದ ಕಾರಣ ಪೋಷಕರು ರಾತ್ರಿಯೆಲ್ಲ ಹುಡುಕಾಟ ನಡೆಸಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಬೆಳಗ್ಗೆ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೋಷಕರು ಮತ್ತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ವಿಜಯಪುರ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದರು. ಮೂವರು ಬಾಲಕರ ಮೃತದೇಹವನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮೊದಲು ಇಂತಹದ್ದೇ ಪ್ರಕರಣಗಳು ರಾಜ್ಯದ ಕೆಲವೆಡೆ ವರದಿಯಾಗಿದ್ದವು. ನಾಲ್ಕೈದು ದಿನಗಳ ಹಿಂದೆ ಮೈಸೂರಿನ ಕೆಆರ್ಎಸ್ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಚಿರಂತ್ ಮತ್ತು ಸುನೀಲ್ (22) ಮೃತರು. ಸ್ನೇಹಿತರಿಬ್ಬರು ಒಟ್ಟಿಗೆ ಈಜಲು ತೆರಳಿದ್ದರು. ಸುಮಾರು ಅರ್ಧ ಗಂಟೆ ಈಜಿದ ನಂತರ ಇಬ್ಬರೂ ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದರು.