ದೊಡ್ಡಬಳ್ಳಾಪುರ: ಈಜಲು ತೆರಳಿದ್ದ ಯುವಕನೋರ್ವ ನೀರಿನ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ದೊಡ್ಡಗಟ್ಟಮಡಗು ಗ್ರಾಮದಲ್ಲಿ ನಡೆದಿದೆ.
ಮಗಧೀರ ಅಲಿಯಾಸ್ ರವಿಕುಮಾರ್ ಅನುಮಾನಾಸ್ಪಾದವಾಗಿ ಸಾವನ್ನಪ್ಪಿರುವ ಯುವಕ. ಸುಮಾರು 27ವರ್ಷದ ರವಿಕುಮಾರ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ದೊಡ್ಡಗಟ್ಟಮಡಗು ಗ್ರಾಮದಲ್ಲಿ ತಂದೆ -ತಾಯಿಯ ಜೊತೆ ವಾಸವಾಗಿದ್ದ.
ನಿನ್ನೆ ಗ್ರಾಮದ ಹೊರಗೆ ಶಾರದಮ್ಮ ಎಂಬುವರಿಗೆ ಸೇರಿದ ತೋಟದದಲ್ಲಿರುವ ನೀರಿನ ತೊಟ್ಟಿಯಲ್ಲಿ ಸ್ನೇಹಿತರ ಜೊತೆ ಈಜಲು ಹೋಗಿದ್ದ. ಅನಂತರ ಆತ ಶವವಾಗಿ ವಾಪಸಾಗಿದ್ದಾನೆ. ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಕಂಡರೂ ಸಾವಿನ ಹಿಂದೆ ಕೊಲೆಯ ನೆರಳು ಗಾಢವಾಗಿ ಕಾಡುತ್ತಿದೆ.
ಮೇಲ್ನೋಟಕ್ಕೆ ರವಿಕುಮಾರ್ ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿರುವಂತೆ ಕಂಡರೂ ಯುವಕನ ಹೆತ್ತವರು ಇದು ಕೊಲೆ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಲಾರಿ ಚಾಲಕನಾಗಿದ್ದ ರವಿ ಕೈತುಂಬಾ ಹಣ ಸಂಪಾದನೆ ಮಾಡುತ್ತಿದ್ದ. ಇದರ ಜೊತೆ ಸ್ನೇಹಿತರ ದೊಡ್ಡ ಬಳಗವು ಅವನ ಜೊತೆ ಇತ್ತು. ಕಳೆದೊಂದು ತಿಂಗಳಿಂದ ಕೆಲಸಕ್ಕೆ ಹೋಗದೆ ಊರಿನಲ್ಲಿದ್ದ. ಅಲ್ಲದೆ ರವಿ ಸ್ನೇಹಿತರ ಜೊತೆ ಈಜಲು ಹೋಗುತ್ತಿದ್ದ. ನಿನ್ನೆ ಮಧ್ಯಾಹ್ನ ಸಹ ಗ್ರಾಮದ ಹೊರಭಾಗದಲ್ಲಿರುವ ತೋಟದಲ್ಲಿನ ನೀರಿನ ತೊಟ್ಟಿಯಲ್ಲಿ ಈಜಲು ಹೋಗಿದ್ದ. ನಂತರ ಆತನ ಪತ್ತೆ ಇರಲಿಲ್ಲ. ಇಂದು ಬೆಳಗ್ಗೆ ನೀರಿನ ತೊಟ್ಟಿಯಲ್ಲಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನೀರಿನ ತೊಟ್ಟಿ ಇರೋದೆ 10 ಅಡಿಗಳು ಮಾತ್ರ. ಇಷ್ಟು ಕಡಿಮೆ ಆಳದಲ್ಲಿ ಮುಳುಗಿ ಸಾಯಲು ಸಾಧ್ಯವೇ ಇಲ್ಲ. ತಮ್ಮ ಮಗನನ್ನು ಕೊಲೆ ಮಾಡಿ ನೀರಿನ ತೊಟ್ಟಿಯಲ್ಲಿ ಹಾಕಿ ಹೋಗಿದ್ದಾರೆಂದು ಯುವಕನ ತಾಯಿ ಆರೋಪಿಸಿದ್ದಾರೆ.
ಮೃತನ ತಲೆಯ ಭಾಗದಲ್ಲಿ ಗಾಯದ ಗುರುತು ಇದ್ದು, ಹೊಡೆದು ಸಾಯಿಸಿದ್ದಾರೆ ಎಂದು ಆತನ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ರವಿಕುಮಾರ್ ಜೊತೆ ಈಜಲು ಹೋಗುತ್ತಿದ್ದ ಯುವಕರು ಘಟನೆಯ ನಂತರ ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ. ಸ್ನೇಹಿತರ ನಡುವಿನ ಜಗಳಕ್ಕೆ ರವಿಕುಮಾರ್ ಕೊಲೆಯಾಗಿರುವ ಸಾಧ್ಯತೆ ಇದೆ.
ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದ್ದು, ರವಿಕುಮಾರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನಾ ಅಥವಾ ಸ್ನೇಹಿತರಿಂದ ಕೊಲೆಯಾದ್ನಾ ಅನ್ನೋದು ತನಿಖೆಯಿಂದ ಮಾತ್ರ ತಿಳಿಯಬೇಕಿದೆ.