ಆನೆಕಲ್: ರೈತರ ಜಮೀನು ಕಸಿಯುವ ಭೂಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ, ಆನೇಕಲ್ ಸರ್ಜಾಪುರ ಹೋಬಳಿಯ ದೊಮ್ಮಸಂದ್ರ ವೃತ್ತದಲ್ಲಿ ರೈತರು ರಸ್ತೆ ತಡೆದು ಹೋರಾಟ ನಡೆಸಿದರು.
ಸಿಎಂ ಸ್ಥಾನವಿರುವುದು ರಾಜ್ಯವನ್ನು ಮಾರಾಟ ಮಾಡುವುದಕ್ಕಲ್ಲ: ಕೋಡಿಹಳ್ಳಿ ಚಂದ್ರಶೇಖರ್
ರೈತರ ಜಮೀನು ಕಸಿಯುವ ಭೂಸ್ವಾಧೀನ ಕಾಯ್ದೆಯನ್ನು ಹಿಂಪಡೆದು ಕೂಡಲೇ, ಅರ್ಹಫಲಾನುಭವಿಗಳಿಗೆ ಭೂ ಮಂಜಾರಾತಿಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ರೈತರು ಆನೆಕಲ್ನಲ್ಲಿ ಪ್ರತಿಭಟನೆ ಮಾಡಿದರು.
ಹೋರಾಟದ ಭಾಗವಾಗಿ ಮಾತನಾಡಿದ ರೈತ ಚಳವಳಿ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, 1976-77ರ ನಡುವೆ ಜಿಂದಾಲ್ ಉಕ್ಕು ಕಾರ್ಖಾನೆಗೆ ಇಂದಿರಾಗಾಂಧಿರವರ ಸಹಕಾರದಿಂದ 250 ಎಕರೆ ಭೂಮಿ ಮಂಜೂರಾಗಿತ್ತು. ಹಾಗೇ ಬದಲಾಗುತ್ತಾ ಬಂದ ಸರ್ಕಾರಗಳ ಜನಪ್ರತಿನಿಧಿಗಳು ಆಗಾಗ್ಗೆ ಜಮೀನು ವಿಸ್ತಾರಕ್ಕೆ ಕೈಜೋಡಿಸಿ ಆ ಕಂಪನಿಗೆ ಅನುವು ಮಾಡಿಕೊಟ್ಟಿದ್ದಾರೆ. ಅದನ್ನೇ ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಜಾಗದ ವಿಸ್ತರಣೆ ಮಾಡಲು ಸಹಕರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಫೈವ್ ಸ್ಟಾರ್ ಹೊಟೆಲ್ ಬಿಟ್ಟು ಗ್ರಾಮವಾಸ್ತವ್ಯಕ್ಕೆ ಸಿಎಂ ತಯಾರಿರುವುದು ಸ್ವಾಗತ ಆದರೆ, ರೈತರ ಜಮೀನು ಕಸಿಯುವ ಭೂಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು. ಕೇಂದ್ರದ ಯುಪಿಎ ಸರ್ಕಾರ ಭೂಸ್ವಾಧೀನ ಕಾಯ್ದೆಯನ್ನು ರೈತರ ಪರ ಘೋಷಿಸಿ ಜಾರಿಮಾಡಿತ್ತು. ಆದರೆ ಕುಮಾರಸ್ವಾಮಿ ಆಡಳಿತ ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿ ಗೋಮಾಳ, ಖರಾಬು ಮುಂತಾದ ಸರ್ಕಾರಿ ಭೂಮಿಯನ್ನು ಗುರ್ತಿಸಿ ವಶಕ್ಕೆ ಪಡೆದು ಜನಪ್ರತಿನಿಧಿಗಳ ಹಿಂಬಾಲಕರಿಗೆ ದಕ್ಕುವಂತೆ ಮಾಡಿದ್ದಾರೆ. ಇದು ಕೂಡಲೇ ನಿಂತು ಅರ್ಹಫಲಾನುಭವಿಗಳಿಗೆ ಭೂ ಮಂಜಾರಾತಿಗೆ ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದರು.