ದೊಡ್ಡಬಳ್ಳಾಪುರ: ಸ್ನಾನಕ್ಕೆಂದು ಬಾತ್ರೂಮ್ಗೆ ಹೋದ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ವರದಕ್ಷಿಣೆಗಾಗಿ ಕೊಲೆ ಮಾಡಿದ್ದರೆಂದು ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಇಲ್ಲಿನ ಬಸವೇಶ್ವರ ನಗರ ನಿವಾಸಿ ಆಶಾ(30) ಎಂಬವರು ಮೃತಪಟ್ಟ ಮಹಿಳೆ. ವರದಕ್ಷಿಣೆ ಹಿನ್ನೆಲೆಯಲ್ಲಿ ಆಶಾಳನ್ನು ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ನೆಲಮಂಗಲ ತಾಲೂಕಿನ ಕಳಸೇಗೌಡನಪಾಳ್ಯದ ಆಶಾ ಎಂಬಾಕೆಯನ್ನು 2011ರಲ್ಲಿ ದೊಡ್ಡಬಳ್ಳಾಪುರ ನಗರದ ಬಸವೇಶ್ವರನಗರ ನಿವಾಸಿ, ವೃತ್ತಿಯಲ್ಲಿ ಪೈಂಟರ್ ಆಗಿದ್ದ ಜಯರಾಮ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ 9 ವರ್ಷ ಮತ್ತು 3 ವರ್ಷದ ಎರಡು ಹೆಣ್ಣು ಮಕ್ಕಳಿದ್ದಾರೆ.
ಮೃತಳ ಕುಟುಂಬಸ್ಥರ ಆರೋಪ: "ಮದುವೆ ಸಮಯದಲ್ಲಿ ಜಯರಾಮನಿಗೆ ವರದಕ್ಷಿಣೆ ರೂಪದಲ್ಲಿ 140 ಗ್ರಾಂ ಚಿನ್ನ ಹಾಗೂ ನಗದು ಸಹ ನೀಡಲಾಗಿತ್ತು. ಆದರೂ ಮದುವೆಯಾದ ಕೆಲವೇ ವರ್ಷಗಳಲ್ಲಿ ವರದಕ್ಷಿಣೆ ತರುವಂತೆ ಗಂಡನ ಮನೆಯವರು ದೈಹಿಕ ಹಲ್ಲೆ ನಡೆಸಿದ್ದಾರೆ. ಒಂದು ತಿಂಗಳ ಹಿಂದೆ ಫೋನ್ ಮಾಡಿದ ಆಶಾ ಎರಡು ಲಕ್ಷ ಹಣ ನೀಡುವಂತೆ ಗಂಡ ಜಯರಾಮ್, ಅತ್ತೆ ರತ್ನಮ್ಮ, ಪತಿಯ ಅಕ್ಕನ ಗಂಡ ನಂದಕುಮಾರ್ ಕಿರುಕುಳ ಕೊಡುತ್ತಿದ್ದರೆಂದು ಹೇಳಿದ್ದಾಳೆ. ಈ ಸಂದರ್ಭದಲ್ಲಿ ನಾವು ನಮ್ಮ ಬಳಿ ಹಣ ಇಲ್ಲ ಎಂದು ಹೇಳಿದೆವು. ಅಂದಿನಿಂದ ಆಕೆ ಕರೆ ಮಾಡಿಲ್ಲ" ಎಂದು ಮೃತಳ ಪೋಷಕರು ತಿಳಿಸಿದ್ದಾರೆ.
ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ "ಆಗಸ್ಟ್ 24ರಂದು ಪೋನ್ ಮಾಡಿದ ಜಯರಾಮ, ಆಶಾಳಿಗೆ ಮೂರ್ಚೆರೋಗ ಬಂದಿತ್ತು. ಖಾಸಗಿ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದಿದ್ದಾನೆ. ತಕ್ಷಣ ನಾವು ಆಸ್ಪತ್ರೆಗೆ ಹೋದರೂ ಸಹ ಮಗಳನ್ನು ನೋಡಲು ಬಿಡಲಿಲ್ಲ. ಬುಧವಾರ ಸಂಜೆ ಮಗಳು ಮೃತಪಟ್ಟಿರುವುದಾಗಿ ತಿಳಿಸಿ ಮೃತದೇಹ ನೋಡಲು ಬಿಟ್ಟಿದ್ದಾರೆ. ನಮ್ಮ ಮಗಳ ಸಾವಿಗೆ ಜಯರಾಮ ಮತ್ತು ಆತನ ಮನೆಯವರೇ ಕಾರಣ" ಎಂದು ಆಶಾ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
ಇನ್ನು ಆಶಾಳ 9 ವರ್ಷದ ಮಗಳಿಗೆ ಜಯರಾಮನ ಮನೆಯವರು ಬರೆ ಹಾಕಿ ಕಿರುಕುಳ ನೀಡಿರುವುದು ಸಹ ತಿಳಿದುಬಂದಿದೆ. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದು, ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
ಜಯರಾಮ ಕುಟುಂಬದ ಹೇಳಿದ್ದು ಹೀಗೆ...
ಮಂಗಳವಾರ ಮಧ್ಯಾಹ್ನ ಸ್ನಾನಕ್ಕೆಂದು ಹೋದ ಹೆಂಡತಿ ಎರಡು ಗಂಟೆಯಾದರೂ ಹೊರಬಾರದಿರುವುದನ್ನು ಕಂಡು ಬಾಗಿಲು ಮುರಿದು ಒಳಹೋಗಿ ನೋಡಿದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಗೀಸರ್ ವಾಸನೆಗೆ ಫಿಟ್ಸ್ ಬಂದಿದೆ ಎಂದು ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಆಶಾ ಮೃತಪಟ್ಟಿದ್ದಾಳೆ. ಇನ್ನು ಪಠ್ಯದ ಕೆಲಸಗಳನ್ನು ಸರಿಯಾಗಿ ಮಾಡದ ಕಾರಣ ನನ್ನ ಅಕ್ಕನ ಮಗ ಮಗಳ ಮೇಲೆ ಬರೆ ಹಾಕಿದ್ದಾನೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಹೇಳಿದ್ದಾರೆ.
ಸದ್ಯ ಮಹಿಳೆಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.