ಹೊಸಕೋಟೆ(ಬೆಂಗಳೂರು):ರಸ್ತೆ ಅಪಘಾತದಲ್ಲಿ ತೀವ್ರವಾಗಿ ತಲೆಗೆ ಪೆಟ್ಟಾಗಿ ಸಾಯುವ ಕೊನೆಗಳಿಗೆಯಲ್ಲಿದ್ದಳು ಆಕೆ, ತಲೆ ಬರುಡೆ ಒಡೆದು ಮೆದುಳು ಹೊರಬಂದು ಬದುಕಲು ಸಾಧ್ಯವೇ ಇಲ್ಲದ ಸ್ಥಿತಿ. ಆದರೆ ಹೊಸಕೋಟೆಯ ಸಿಲಿಕಾನ್ ಆಸ್ಪತ್ರೆ ವೈದ್ಯರ ಶಸ್ತ್ರಚಿಕಿತ್ಸೆಯಿಂದ ಆಕೆ ಪುನರ್ಜನ್ಮ ಪಡೆದಿದ್ದಾಳೆ. ಹೌದು, ರಾಷ್ಟ್ರೀಯ ವೈದ್ಯರ ದಿನವಾದ ಇಂದು ಈ ಸ್ಟೋರಿ ವೈದ್ಯರಿಗೆ ಮಾದರಿಯಾಗಿದೆ.
ಹೊಸಕೋಟೆ ತಾಲೂಕಿನ ಹಿಂಡಿಗನಾಳದ ಪ್ರಿಯಾ ಪಾಲಿಗೆ ವೈದ್ಯರೇ ಸಾಕ್ಷಾತ್ ದೇವರಾಗಿದ್ದಾರೆ. ಸತ್ತೇ ಹೋಗುತ್ತಾಳೆಂದು ತಿಳಿದ ಕುಟುಂಬಸ್ಥರು ಆಕೆ ಬದುಕುವ ನಂಬಿಕೆ ಕಳೆದುಕೊಂಡು ಬಿಟ್ಟಿದ್ದರು. ಆದರೆ, ಸಿಲಿಕಾನ್ ಸಿಟಿಯ ಆಸ್ಪತ್ರೆಯೊಂದರ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಆಕೆಗೆ ಮರುಜೀವ ನೀಡಿದೆ. ಹೌದು, ಇದೇ ತಿಂಗಳ 18ರಂದು ಪ್ರಿಯಾ ಸ್ಕೂಟರ್ನಲ್ಲಿ ಅತ್ತೆಯ ಜೊತೆ ಹೆಚ್ ಕ್ರಾಸ್ನಿಂದ ಹಿಂಡಿಗನಾಳದ ಗ್ರಾಮದತ್ತ ಬರುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಇವರ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದು, ರಸ್ತೆ ಅಪಘಾತದಲ್ಲಿ ಪ್ರಿಯಾ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅಲ್ಲದೆ, ತಲೆ ಬರುಡೆ ಒಡೆದು ಮೆದುಳು ಹೊರ ಬಂದಿತ್ತು. ಗಾಯಗೊಂಡಿದ್ದ ಪ್ರಿಯಾ ಮತ್ತು ಅವರ ಅತ್ತೆಯನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆಸ್ಪತ್ರೆಗೆ ಬಂದ ಪ್ರಿಯಾ ಅವರನ್ನು ವೈದ್ಯರು ಪರೀಕ್ಷಿಸಿದಾಗ ಪಲ್ಸ್ ಮತ್ತು ಬಿಪಿ ಇರಲಿಲ್ಲ. ಮೊದಲಿಗೆ ಅವರ ಜೀವ ಉಳಿಸುವ ಯತ್ನ ನಡೆಸಿದ ವೈದ್ಯರು ಬಿಪಿ ಮತ್ತು ಪಲ್ಸ್ ಸಹಜ ಸ್ಥಿತಿಗೆ ಬರುವಂತೆ ಮಾಡಿದರು. ಆದರೆ ಆಕೆಯ ತಲೆ ಬುರುಡೆ ಒಡೆದು ಮೆದುಳು ಹೊರ ಬಂದಿತ್ತು. ವೈದ್ಯರ ಪಾಲಿಗೆ ಸವಾಲಿನ ಕೆಲಸವೇ ಆಗಿತ್ತು. ನ್ಯೂರೋ ಸರ್ಜನ್ ಡಾ. ಸುಪ್ರೀತ್ ಪ್ರಿಯಾ ಅವರ ಜೀವ ಉಳಿಸುವ ಪ್ರಯತ್ನಕ್ಕೆ ಮುಂದಾದರು.