ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿ ಘಾಟಿಯಲ್ಲಿ ನಡೆಯುತ್ತಿದ್ದ ದನಗಳ ಜಾತ್ರೆಯನ್ನು ವಾಪಸ್ಸು ಕಳಿಸಲಾಗಿದೆ. ದೊಡ್ಡಬಳ್ಳಾಪುರ: ಜಿಲ್ಲೆಯಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡಿರುವ ಹಿನ್ನೆಲೆ ಘಾಟಿ ದನಗಳ ಜಾತ್ರೆಗೆ ಜಿಲ್ಲಾಧಿಕಾರಿಗಳು ನಿಷೇಧ ಹೇರಿದ್ದರು. ಆದರೆ, ಜಿಲ್ಲಾಧಿಕಾರಿಗಳ ಆದೇಶ ಧಿಕ್ಕಾರಿಸಿದ ರೈತರು ಸ್ವಯಂ ಪ್ರೇರಿತರಾಗಿ ದನಗಳ ಜಾತ್ರೆ ನಡೆಸುತ್ತಿದ್ದರು. ದನಗಳ ಜಾತ್ರೆಯಲ್ಲಿ ಚರ್ಮಗಂಟು ಪತ್ತೆಯಾದ ಹಿನ್ನೆಲೆ ಜಿಲ್ಲಾಡಳಿತದ ಆದೇಶದಂತೆ ಪೋಲೀಸ್ ಬಂದೋಬಸ್ತ್ ಮೂಲಕ ದನಗಳನ್ನು ವಾಪಸ್ ಕಳುಹಿಸಲಾಯಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,62, 980 ಜಾನುವಾರುಗಳಿದ್ದು, ಚರ್ಮಗಂಟು ರೋಗದಿಂದ 157 ಜಾನುವಾರುಗಳು ಸಾವನ್ನಪ್ಪಿದವು, ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ 2022ರ ನವೆಂಬರ್ 30 ರಿಂದ 2023ರ ಜನವರಿ 31ರ ಎರಡು ತಿಂಗಳು ಜಾನುವಾರುಗಳ ಸಂತೆ, ಜಾತ್ರೆ ಮತ್ತು ಸಾಗಣೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.
ಘಾಟಿ ಜಾತ್ರೆ:ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿದ ರೈತರು ಸ್ವಯಂಪ್ರೇರಿತರಾಗಿ ಜನವರಿ 16 ರಿಂದ 23ರ ವರೆಗೂ ಘಾಟಿ ಜಾತ್ರೆ ಪ್ರಾರಂಭಿಸಿದರು. ಕಳೆದ ಮೂರು ದಿನಗಳಿಂದ ಜಾತ್ರೆಗೆ ಜಾನುವಾರು ಕರೆತರದಂತೆ ಪಶು ವೈದ್ಯರು, ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, ರೈತರು ಅಧಿಕಾರಿಗಳ ಮಾತಿಗೆ ಬೆಲೆ ಕೊಡದೇ ಘಾಟಿ ದನಗಳ ಜಾತ್ರೆಗೆ ಮತ್ತಷ್ಟು ದನಗಳನ್ನು ಕರೆದುಕೊಂಡು ಬಂದಿದ್ದರು.
ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿ ಘಾಟಿ ದನಗಳ ಜಾತ್ರೆ ನಡೆಸುತ್ತಿರುವ ಬಗ್ಗೆ ಪಶು ವೈದ್ಯರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿದ್ದರು. ಜಾನುವಾರು ಜಾತ್ರೆ ತಡೆದು, ತೆರವು ಮಾಡುವಂತೆ ಜಿಲ್ಲಾಧಿಕಾರಿ ಆರ್. ಲತಾ ಅವರು ಗುರುವಾರ ರಾತ್ರಿ ಅಧಿಕಾರಿಗಳಿಗೆ ಸೂಚಿಸಿದ್ದರು. ಅಲ್ಲದೇ ದೂರು ದಾಖಲಿಸುವಂತೆ ಸಲಹೆ ನೀಡಿದ್ದರು. ಅದರಂತೆ ಇಂದು ಪಶು ಇಲಾಖೆ ಉಪನಿರ್ದೇಶಕ ಡಾ.ಜಿ.ಎಂ.ನಾಗರಾಜು, ಸಹಾಯಕ ನಿರ್ದೇಶಕ ಡಾ.ವಿಶ್ವನಾಥ , ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ ಜಾತ್ರೆಯಿಂದ ರೈತರನ್ನು ವಾಪಸ್ ಕಳುಹಿಸಿದ್ದಾರೆ.
ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೇರಿದ್ದ ರಾಸುಗಳ ಜಾತ್ರೆಯಲ್ಲಿ ನಾಲ್ಕಾರು ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆಯ ಲಕ್ಷಣಗಳಿರುವುದು ಪತ್ತೆಯಾದವು. ಇದನ್ನು ಗಮನಿಸಿದ ಪಶುವೈದ್ಯರು ರೈತರಿಗೆ ತಿಳಿ ಹೇಳಿ ಎತ್ತಂಗಡಿ ಮಾಡಿಸಿದರು. ರೈತರು ಹಾಕಿದ ಪೆಂಡಾಲ್ಗಳನ್ನ ತೆಗೆಯುವ ಮೂಲಕ ಜಾತ್ರೆ ಸೇರಿದ ರೈತರನ್ನು ಕಳುಹಿಸುತ್ತಿದ್ದಾರೆ.
ಹೋದ ವರ್ಷ ಆಗಸ್ಟ್ ತಿಂಗಳಿಂದ ದನಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದೆ. ಮೊದಲಿಗೆ ಹಾವೇರಿ, ಹೊಸಪೇಟೆ, ಬಳ್ಳಾರಿ ಮತ್ತು ಬೆಳಗಾವಿಯ ಸುತ್ತಮುತ್ತ ರಾಸುಗಳನ್ನು ಬಾಧಿಸಿತ್ತು. ನಂತರ ರಾಜ್ಯದ ಇತರ ಜಿಲ್ಲೆಗಳಲ್ಲೂ ಈ ಚರ್ಮಗಂಟು ರೋಗ ಕಂಡು ಬಂದಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆಗಳನ್ನು ಕೊಟ್ಟರೂ, 204 ಹಸುಗಳು ಈ ಕಾಯಿಲೆಯಿಂದ ಮೃತಪಟ್ಟಿವೆ.
ಕೊಡಗು ಜಿಲ್ಲೆಯೊಂದು ಬಿಟ್ಟು ಬಾಕಿ ಎಲ್ಲಾ ಕಡೆ ಹಸುಗಳಿಗೆ ಈ ರೋಗ ಕಂಡು ಬಂದಿದ್ದರಿಂದ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ರಾಸುಗಳ ಸಂತೆ, ಜಾತ್ರೆ, ಮಾರಾಟ ಇತ್ಯಾದಿಗಳನ್ನು ತಡೆದು ಆದೇಶ ಹೊರಡಿಸಿದೆ. ಅದರಂತೆ ಇಲ್ಲಿ ನೆರೆದಿದ್ದ ರೈತರಿಗೆ ಈ ಬಗ್ಗೆ ಮನವರಿಕೆ ಮಾಡಿ ಜಾತ್ರೆಯನ್ನು ಮುಂದುವರೆಸದಂತೆ ಮನವಿಮಾಡಿ ಮನೆಗೆ ಕಳಿಸಿದ್ದೇವೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಜಿ.ಎಂ. ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕಿನ ಸಪ್ಪಲಮ್ಮ ದನಗಳ ಜಾತ್ರೆ ನಡೆದ್ದಾಗ ಸುಮ್ಮನಿದ್ದ ಜಿಲ್ಲಾಡಳಿತ ಇಂದು ಘಾಟಿ ದನಗಳ ಜಾತ್ರೆ ತೆರವು ಮಾಡುತ್ತಿರುವುದ್ಯಾಕೇ ಎಂಬುದು ರೈತರ ಪ್ರಶ್ನೆಯಾಗಿದೆ. ಈಗಾಗಲೇ ದನಗಳ ಜಾತ್ರೆ ಪ್ರಾರಂಭವಾಗಿ 4 ದಿನ ಆಗಿದೆ. ಇಂದು ಏಕಾಏಕಿ ಬಂದು ದನಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ದನಗಳ ಮಾರಾಟವಾಗದಿದ್ದಾರೆ ಇಡೀ ವರ್ಷ ಅವುಗಳನ್ನು ಸಾಕಬೇಕಾದ ಹೊರೆ ನಮ್ಮ ಮೇಲೆ ಬೀಳಲಿದೆ ಎಂದು ರೈತರು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ದನಗಳ ಜಾತ್ರೆಗೆ ನಿಷೇಧ.. ನಿರ್ಬಂಧದ ನಡುವೆಯೂ ಘಾಟಿ ದನಗಳ ಜಾತ್ರೆ ಪ್ರಾರಂಭ..