ನೆಲಮಂಗಲ:ವಿಶ್ವ ಪರಿಸರ ದಿನದ ಅಂಗವಾಗಿ ಬೆಂಗಳೂರು ಹೊರವಲಯದ ಹೆಸರಘಟ್ಟದ ಐಐಹೆಚ್ ಆರ್ ನಲ್ಲಿ 25 ಎಕರೆ ವಿಸ್ತಿರ್ಣದ ಜೈವಿಕ ಉದ್ಯಾನವನವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕೆ ಉದ್ಘಾಟಿಸಿದ್ದಾರೆ.
ಹೆಸರ ಘಟ್ಟದ ಐಐಹೆಚ್ ಆರ್ ನಲ್ಲಿ ಜೈವಿಕ ಉದ್ಯಾನ ಉದ್ಘಾಟಿಸಿದ ಸಾಲು ಮರದ ತಿಮ್ಮಕ್ಕ ವಿಶ್ವ ಪರಿಸರ ದಿನವನ್ನು ವಾಯು ಮಾಲಿನ್ಯ ಶಿರ್ಷಿಕೆಯಡಿ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಅವರಣದಲ್ಲಿ ಜೈವಿಕ ಉದ್ಯಾನವನ್ನು ಸ್ಥಾಪನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹೆಸರಘಟ್ಟದ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡು ಜೈವಿಕ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು.
ಜೈವಿಕ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಸಾಲು ಮರದ ತಿಮ್ಮಕ್ಕ, ಈ ದಿನ ಮರ ಹಾಕುವ ಭಾಗ್ಯ ನನ್ನದು. ನಾನು ನನ್ನ ಪತಿ ನಾಲ್ಕು ಕಿ.ಮೀ ಮರಗಳನ್ನು ಹಾಕಿ ಮಕ್ಕಳಂತೆ ಪೋಷಿಸಿದೆವು. ಇವತ್ತು ಇದೇ ಮರಗಳು ನಮಗೆ ಹೆಮ್ಮ ತಂದಿವೆ. ಹಾಗೆ ಮರಗಳನ್ನು ರಕ್ಷಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ ಎಂದರು.
ಸಾಲು ಮರದ ತಿಮ್ಮಕ್ಕ ತಮ್ಮ ಪತಿ ಜೊತೆಯಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದಿಂದ ಕುದೂರು ಗ್ರಾಮದವರೆಗೂ ಸುಮಾರು 4 ಕಿ.ಮೀ ಸಾಲು ಮರಗಳನ್ನು ಹಾಕಿ ಅವುಗಳನ್ನು ತಮ್ಮ ಮಕ್ಕಳಂತೆ ಸಾಕಿದ್ರು. ಇದೀಗ ಈ ಮರಗಳು ಬೃಹದಾಗಿ ಬೆಳೆದು ದಾರಿಹೋಕರಿಗೆ ನೆರಳು ಮತ್ತು ಪ್ರಾಣಿ ಪಕ್ಷಿಗಳಿಗೆ ಹಣ್ಣು ಹಂಪಲು ನೀಡುತ್ತಿವೆ. ರಾಜ್ಯ ಹೆದ್ದಾರಿ 94ರ ಹಲಗೂರು ಮತ್ತು ಬಾಗೇಪಲ್ಲಿ ರಸ್ತೆ ಅಗಲೀಕರಣದಿಂದ ಸಾಲು ಮರದ ತಿಮ್ಮಕ್ಕನವರ ಮರಗಳಿಗೆ ಕೊಡಲಿ ಬಿಡುವ ಸಾಧ್ಯತೆ ಇತ್ತು.
ಎರಡು ಮೂರು ದಿನಗಳಿಂದ ರಸ್ತೆ ಮಾಡಲು ಮರ ಕಡಿಯುವುದಾಗಿ ಹೇಳಿ ನಿನ್ನೆ ಮೊನ್ನೆ ನಮಗೆ ಸಾಕಷ್ಟು ಹಿಂಸೆ ಕೊಟ್ಟರು. ನಾನು ಯಾವುದೇ ಕಾರಣಕ್ಕೂ ಮರಗಳನ್ನ ಕತ್ತರಿಸೊಕ್ಕೆ ಬಿಡೋದಿಲ್ಲ. ಈ ಸಾಲು ಮರಗಳಿಂದ ಹುಲಿಕಲ್ ಮತ್ತು ಕುದೂರು ಜನತೆಗೆ ಒಳ್ಳೆಯದಾಗಿದೆ. ಮರಗಳನ್ನು ಕಡಿಯದಂತೆ ಮನವಿ ಮಾಡಲು ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ಭೇಟಿ ಮಾಡಿದ್ದೆ. ದೇಶಕ್ಕೋಸ್ಕರ ಮರಗಳನ್ನ ಕಡಿಯದಂತೆ ಕಾಪಾಡಿ ಅಂತ ಮನವಿ ಸಲ್ಲಿಸಿದ್ದು, ಸಿಎಂ ಅವರು ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯೊಕ್ಕೆ ಬಿಡಲ್ಲ ಅಂತ ಮಾತು ಕೊಟ್ಟಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ ಎಂದು ತಿಮ್ಮಕ್ಕ ಹೇಳಿದರು.
ಸೆಲ್ಫಿಗಾಗಿ ಮುಗಿ ಬಿದ್ದ ವಿದ್ಯಾರ್ಥಿಗಳು:ಹೆಸರಘಟ್ಟದ ಐಐಹೆಚ್ ಆರ್ ನಲ್ಲಿ ಜೈವಿಕ ಉದ್ಯಾನ ಉದ್ಘಾಟನೆಗೆ ಬಂದಿದ್ದ ವಿದ್ಯಾರ್ಥಿಗಳು ಸಾಲು ಮರದ ತಿಮ್ಮಕ್ಕರವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು. ಉದ್ಘಾಟನೆ ಮಾಡಿದ ತಕ್ಷಣವೇ ನಾಮುಂದು ತಾಮುಂದು ಎನ್ನುತ್ತ ತಿಮ್ಮಕ್ಕ ಅವರ ಬಳಿ ಬಂದು ಸೆಲ್ಫಿ ತೆಗೆಸಿಕೊಂಡರು.