ದೇವನಹಳ್ಳಿ:ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರಿಗೆ ಕ್ವಾರೆಂಟೀನ್ ಸೌಲಭ್ಯಗಳನ್ನು (Quarantine Facilities) ಒದಗಿಸಲು ವಿಶೇಷ ತಂಡವನ್ನ ರಚನೆ ಮಾಡಲಾಗಿದೆ.
ದೇವನಹಳ್ಳಿ ತಾಲೂಕಿನ ಪ್ರಸನ್ನಹಳ್ಳಿ ಗ್ರಾಮದಲ್ಲಿರುವ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ಕ್ವಾರೆಂಟೀನ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮೇಲ್ವಿಚಾರಣೆಗಾಗಿ ತಾಲೂಕು ಮಟ್ಟದ ಅಧಿಕಾರಿಗಳು, ಉಪತಹಶೀಲ್ದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು, ಪುರಸಭೆಯ ಕಂದಾಯ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳ ಅಧೀನ ಸಿಬ್ಬಂದಿ, ಭೂ ಮಾಪಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡಂತೆ 24*7 ರಂತೆ ಪಾಳಿಯಲ್ಲಿ ಕಾರ್ಯನಿರ್ವಹಿಸಲು ತಂಡವನ್ನು ರಚಿಸಲಾಗಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದ್ದಾರೆ.
ಕೆಐಎಎಲ್ನಿಂದ ಬರುವ ಪ್ರಯಾಣಿಕರಿಗೆ ಕ್ವಾರೆಂಟೀನ್ ಸೌಲಭ್ಯ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖುದ್ದು ಹಾಜರಿದ್ದು, ವಿಮಾನದಲ್ಲಿ ಬರುವ ಪ್ರಯಾಣಿಕರನ್ನು ಬಸ್ಗಳ ಮೂಲಕ ದೇವನಹಳ್ಳಿ ಪಟ್ಟಣದ ಪ್ರಸನ್ನಹಳ್ಳಿ ಗ್ರಾಮದಲ್ಲಿರುವ ಆಕಾಶ್ ಆಸ್ಪತ್ರೆಗೆ ಕರೆದೊಯ್ದು, ಕೊರೊನಾ ವೈರಸ್ ಇರುವ ಬಗ್ಗೆ ತಪಾಸಣೆ ಮಾಡಿಸಬೇಕು. ಕೊರೊನಾ ವೈರಸ್ ಶಂಕಿತ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ 200 ಹಾಸಿಗೆಗಳ (200 ಐಸೋಲೇಷನ್ ಬೆಡ್) ಮತ್ತು ಹೊಸಕೋಟೆಯಲ್ಲಿರುವ ಎಂ.ವಿ.ಜೆ. ಮೆಡಿಕಲ್ ಕಾಲೇಜಿನಲ್ಲಿ 200 ಹಾಸಿಗೆಗಳ ಪ್ರತ್ಯೇಕ ಕೋಣೆ (200 ಐಸೋಲೇಷನ್ ಬೆಡ್) ಕಾಯ್ದಿರಿಸಲಾಗಿದೆ.
ಕೊರೊನಾ ವೈರಸ್ ಸೋಂಕಿನ ಪರಿಶೀಲನೆ ಕಾರ್ಯವು ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆ ಕಾಂಪೌಂಡ್ನಲ್ಲಿರುವ ಎಂ.ಸಿ. ಹೆಚ್ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ನಡೆಯುತ್ತಿದ್ದು, 50 ಹಾಸಿಗೆಯ ಸಾಮರ್ಥ್ಯವನ್ನು ಈ ಆಸ್ಪತ್ರೆ ಹೊಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆಕಾಶ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ತಪಾಸಣೆ ಅಷ್ಟೇ ಮಾಡಲಾಗುತ್ತದೆ, 14 ದಿನಗಳ ತಪಾಸಣೆಯ ನಂತರ ಕೊರೊನಾ ವೈರಸ್ ಸೋಂಕಿತರಲ್ಲ ಎಂದು ದೃಡಪಟ್ಟ ಮೇಲೆ ಅವರನ್ನು ಆಸ್ಪತ್ರೆಯಿಂದ ಕಳಿಸಿಕೊಡಲಾಗುವುದು.