ದೊಡ್ಡಬಳ್ಳಾಪುರ :ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಬೆಂಗಳೂರಿಗೆ ತೆರಳುತ್ತಿದ್ದ 60ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಡ್ನಲ್ಲಿ ಪ್ರತಿಭಟನೆ ಮಾಡಲು ತಾಲೂಕಿನ ಆಶಾ ಕಾರ್ಯಕರ್ತೆಯರು ತೆರೆಳುತ್ತಿದ್ದರು. ಈ ವೇಳೆ, ಬಸ್ ನಿಲ್ದಾಣದಲ್ಲಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯಲಾಗಿತ್ತು.
ಬಂಧನ ಖಂಡಿಸಿ ಮಾತನಾಡಿದ ಆಶಾ ಕಾರ್ಯಕರ್ತೆಯರು, ನಾವು ಕಳೆದ 4 ತಿಂಗಳುಗಳಿಂದ ಕೊರೊನಾ ವಾರಿಯರ್ಸ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಮನೆ ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯನ್ನು ಕಾಪಾಡುತ್ತಿದ್ದೇವೆ. ಆದರೆ, ನಮಗೆ ಕಳೆದ 9 ತಿಂಗಳಿಂದ ಪ್ರೋತ್ಸಾಹಧನ ನೀಡಿಲ್ಲ. ರಾಜ್ಯ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ. ಸೇವಾ ಅವಧಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾದರೆ ನಮಗಾಗಲಿ, ನಮ್ಮ ಕುಟುಂಬದ ರಕ್ಷಣೆಗಾಗಲಿ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.