ನೆಲಮಂಗಲ :ನೆಲಮಂಗಲ ಉಪವಿಭಾಗದ ಟೌನ್ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರತ್ಯೇಕವಾಗಿ ಮಿಂಚಿನ ಕಾರ್ಯಾಚರಣೆ ನಡೆಸಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸು ಹಾಗೂ ಹೋರಿಗಳ ರಕ್ಷಣೆ ಮಾಡಿದ್ದಾರೆ.
ನೆಲಮಂಗಲ ಕುಣಿಗಲ್ ಹೆದ್ದಾರಿಯ ಲ್ಯಾಂಕೋ ದೇವಿಹಳ್ಳಿ ಟೋಲ್ ಬಳಿ ಹಾಸನದ ಅರಕಲಗೂಡಿನಿಂದ ತಮಿಳುನಾಡಿನ ಕೃಷ್ಣಗಿರಿಗೆ ಸಾಗಿಸುತ್ತಿದ್ದ ಸುಮಾರು 12 ಹಸುಗಳನ್ನು ಇನ್ಸ್‌ಪೆಕ್ಟರ್ ಹರೀಶ್ ಎಂ ಆರ್ ನೇತೃತ್ವದ ತಂಡ ರಕ್ಷಣೆ ಮಾಡಿದ್ದಾರೆ.
ಇನ್ನು, ಹಸುಗಳನ್ನು ಸಾಗಿಸುತ್ತಿದ್ದ ಕೋಲಾರ ಮೂಲದ ನೂರ್ ಪಾಷಾ (50), ಜಾಬೀರ್ ಪಾಷಾ (26) ಶೇಷಾದ್ರಿಪುರಂನ ಮಂಜುನಾಥ್ (48) ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಇದೇ ಸಂದರ್ಭದಲ್ಲಿ ಟಾಟಾ ಏಸ್ ವಾಹನದಲ್ಲಿ ಮಾಗಡಿ ತಾಲೂಕು ಲಕ್ಕೇನಹಳ್ಳಿಯಿಂದ ಇಸ್ಲಾಂಪುರಕ್ಕೆ ಸಾಗಾಟವಾಗುತ್ತಿದ್ದ ಸುಮಾರು 2 ಹಸು ಹಾಗೂ 2 ಹೋರಿಗಳನ್ನು ಗ್ರಾಮಾಂತರ ಪೊಲೀಸರು ರಕ್ಷಣೆ ಮಾಡಿದ್ದಾರೆ. ಲಕ್ಕೇನಹಳ್ಳಿ ಗ್ರಾಮದ ಲೋಕೇಶ್ ಎಂಬಾತನ್ನು ಬಂಧಿಸಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿವೆ.
ಇನ್ಸ್‌ಪೆಕ್ಟರ್ ಎ ವಿ ಕುಮಾರ್ ನೇತೃತ್ವದ ನೆಲಮಂಗಲ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ ಹಾಸನದಿಂದ ತಮಿಳುನಾಡಿಗೆ ಕ್ಯಾಂಟರ್ ವಾಹನದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸುಮಾರು 13 ಗೋವುಗಳನ್ನು ಎಸ್ಎಲ್ಆರ್ ಸಮುದಾಯ ಭವನದ ಬಳಿ ರಕ್ಷಿಸಿದ್ದು, ಕೋಲಾರ ಮೂಲದ ಸುಲ್ತಾನ್ ಹಾಗೂ ರಾಮನಗರದ ಸಾದಿಕ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ನೆಲಮಂಗಲ ಉಪವಿಭಾಗದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಟೌನ್ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 29 ಗೋವುಗಳನ್ನು ರಕ್ಷಿಸಿದ್ದಾರೆ. ಸದ್ಯ ರಕ್ಷಿಸಿದ ಗೋವುಗಳನ್ನು ಹಂಚಿಪುರದ ಶ್ರೀ ಪ್ರಭುಪಾದ ಗೋಶಾಲೆಯಲ್ಲಿ ಆರೈಕೆ ಮಾಡಲಾಗುತ್ತಿದೆ.