ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿ ಬದಲಾಗಿ ಆಗಸ್ಟ್ ತಿಂಗಳ ಡಿಬಿಟಿ (ನೇರ ನಗದು ವರ್ಗಾವಣೆ) ಹಣ ಒಂದು ವಾರದಲ್ಲಿ ಫಲಾನುಭವಿಗಳ ಖಾತೆಗೆ ಹೋಗಲಿದೆ ಎಂದು ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಅಕ್ಕಿ ಬದಲಾಗಿ ಡಿಬಿಟಿ ಮೂಲಕ ಹಣ ಕೊಡಲಾಗುತ್ತಿದೆ. ಅಕ್ಕಿಯನ್ನು ಪ್ರತಿ ತಿಂಗಳು 10 ಅಥವಾ 11ನೇ ತಾರೀಖು ಕೊಡುತ್ತಿದ್ದೆವು. ಡಿಬಿಟಿ ತಡವಾಗ್ತಿದೆ. ಸಿಸ್ಟಮ್ ಸರಿ ಇರಲಿಲ್ಲ. ಈಗ ಸರಿ ಮಾಡಲಾಗಿದೆ. ಒಂದು ಬಟನ್ ಹೊತ್ತಿದ್ರೆ ಹಣ ಸಂದಾಯ ಆಗಲಿದೆ" ಎಂದರು.
ಹೊಸ ಬಿಪಿಎಲ್ ಕಾರ್ಡ್ ವಿತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ಅರ್ಜಿ ಹಾಕಿದರೆ ಪ್ರಯಾರಿಟಿ ಮೇಲೆ ಕೊಡಲಾಗುವುದು. ಆರೋಗ್ಯ, ವೈದ್ಯಕೀಯ ವೆಚ್ಚ ಭರಿಸುವ ವಿಚಾರವಾಗಿ ಹೆಚ್ಚು ಅರ್ಜಿ ಬರ್ತಿದೆ" ಎಂದು ತಿಳಿಸಿದರು.
ಆಂಧ್ರ ಹಾಗೂ ತೆಲಂಗಾಣದಿಂದ ಅಕ್ಕಿ ಖರೀದಿಸುವ ಸಂಬಂಧ ಮಾತನಾಡಿ, "ಒಂದು ವಾರದಲ್ಲಿ ವಿಚಾರ ಮಾಡಿ ಹೇಳುತ್ತೇವೆಂದು ಆಂಧ್ರ ಸರ್ಕಾರ ತಿಳಿಸಿದೆ. ತೆಲಂಗಾಣದಲ್ಲೂ ಭೇಟಿಯಾಗಿ ಬಂದಿದ್ದೇನೆ. ಪ್ರತಿ ತಿಂಗಳು ಎರಡೂವರೆ ಟನ್ ಬೇಕಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಲಭ್ಯತೆ ಇದೆ. FCI ರೇಟ್ 34 ರೂ. ಸಬ್ಸಿಡಿ ಅಡಿ ಕೊಡುತ್ತಿದೆ. ಇದೆಲ್ಲವೂ ಸೇರಿ 40 ರೂ. ವರೆಗೂ ಬರಲಿದೆ. ಉಳಿದಿದ್ದು ಸಬ್ಸಿಡಿ ಅಡಿ ಬರಲಿದೆ. ನಮಗೆ ಕೇಂದ್ರ ಸರ್ಕಾರ ಕೊಡ್ತಿರೋದು 34ರೂ., ಅವರು ಸಬ್ಸಿಡಿ ಕೊಟ್ಟಂಗೆ ಆಗ್ತಿತ್ತು. ಅಂತಿಮವಾಗಿ ಎಷ್ಟು ಹಣಕ್ಕೆ ಗೋಡೌನ್ ಡೆಲಿವರಿ ಕೊಡ್ತೀರಿ ಅಂತ ಕೇಳಿದ್ದೇವೆ. ಅವರು ಇನ್ನೂ ಅಂತಿಮ ದರ ಹೇಳಿಲ್ಲ" ಎಂದು ಮಾಹಿತಿ ನೀಡಿದರು.
ನಾನು ಬೇಕಾದರೆ ಸಚಿವ ಸ್ಥಾನ ಬಿಟ್ಟುಕೊಡ್ತೀನಿ: ಎರಡೂವರೆ ವರ್ಷ ಆದ ಮೇಲೆ ಮಂತ್ರಿಗಳ ಸ್ಥಾನ ಬಿಡಬೇಕೆಂಬ ತಮ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ ಮುನಿಯಪ್ಪ, "ಇದು ನಮ್ಮ ಮನೆ ವಿಚಾರ. ನಾವು ಮಾತಾಡಿದ್ದೇವೆ. ಇದು ನನ್ನ ವೈಯಕ್ತಿಕ ವಿಚಾರ. ರಾಜಕೀಯವಾಗಿ ಪಕ್ಷ ಬಲಪಡಿಸಬೇಕಾದರೆ ಎಲ್ಲರಿಗೂ ಅವಕಾಶ ಕೊಡಬೇಕು. ನಾನು ಬೇಕಾದರೆ ಸಚಿವ ಸ್ಥಾನ ಬಿಟ್ಟುಕೊಡ್ತೀನಿ. ನನಗೇನು ಅಭ್ಯಂತರ ಇಲ್ಲ. ನಾಲ್ಕೈದು ಬಾರಿ ಶಾಸಕರಾದವರಿಗೂ ಇನ್ನು ಸಚಿವ ಸ್ಥಾನ ಸಿಕ್ಕಿಲ್ಲ. ಅಂತಹವರಿಗೂ ಅವಕಾಶ ಕೊಡಬೇಕು. ನಾನು ಕೇಂದ್ರದಲ್ಲಿ ಎರಡು ಬಾರಿ ಮಂತ್ರಿ ಆಗಿದ್ದೆ. ಹೀಗಾಗಿ ಮೊನ್ನೆ ಸಭೆಯಲ್ಲಿ ನನ್ನ ಅಭಿಪ್ರಾಯ ಹೇಳಿದ್ದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಮುಂದಿನ ತೀರ್ಮಾನ ಹೈಕಮಾಂಡ್ ಮಾಡುತ್ತದೆ" ಎಂದರು.
"ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಸಚಿವರು ಸ್ಥಾನ ಬಿಡಬೇಕು ಅನ್ನೋದು ನನ್ನ ಅಭಿಪ್ರಾಯ. ಲೋಕಸಭಾ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯುವಕರಿಗೆ ಆದ್ಯತೆ ಕೊಡಬೇಕು. ಯುವಕರು ರಾಜಕೀಯದಲ್ಲಿ ಬೆಳೆಯಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಇದು. ಆದರೆ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ನೋಡಬೇಕು" ಎಂದು ಹೇಳಿದರು.
ನಟ ಉಪೇಂದ್ರ ಹಾಗೂ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ದಲಿತ ನಿಂದನೆ ಪದ ಪ್ರಯೋಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, "ವ್ಯಕ್ತಿಗತವಾಗಿ ಏನು ಮಾತನಾಡಿದ್ದಾರೋ ಗೊತ್ತಿಲ್ಲ. ದಲಿತರ ಜೊತೆಯಲ್ಲೇ ಇದ್ದು, ಅವರನ್ನು ರಾಜಕೀಯವಾಗಿ ಬೆಳೆಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಜೊತೆಯಲ್ಲೇ ಇಟ್ಟುಕೊಂಡು ಬೆಳೆಸಿದ್ದಾರೆ. ಆದರೆ ಮಲ್ಲಿಕಾರ್ಜುನ್ ಯಾವ ವಿಚಾರದಲ್ಲಿ ಹೇಗೆ ಪದ ಬಳಕೆ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಅವರು ದಲಿತರ ಜೊತೆ ಊಟ ಮಾಡಿ, ಜೊತೆಯಲ್ಲೇ ಇದ್ದುಕೊಂಡೇ ಬೆಳೆಸಿದ್ದಾರೆ" ಎಂದು ಸಮರ್ಥನೆ ಮಾಡಿಕೊಂಡರು.
ಪಾವಗಡ ಆಹಾರ ಇಲಾಖೆ ಅಧಿಕಾರಿಗಳ ಕಮಿಷನ್ ಆರೋಪ ವಿಚಾರಕ್ಕೆ, "15 ದಿನಗಳ ಹಿಂದೆ ನನಗೆ ಪತ್ರ ಬಂದಿದೆ. ಈ ಬಗ್ಗೆ ಅಧಿಕಾರಿಗಳಿಗೆ ತನಿಖೆ ಮಾಡಲು ಆದೇಶ ನೀಡಿದ್ದೇನೆ. ವರದಿ ಬಂದ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ" ಎಂದರು.
ಇದನ್ನೂ ಓದಿ:D.K.Shivakumar: ಎಲ್ಲರ ಮಾತು ಮುಗಿಯಲಿ, ನಂತರ ನಮ್ಮ ಬಳಿ ಇರುವುದನ್ನು ಬಯಲು ಮಾಡುತ್ತೇವೆ- ಡಿ.ಕೆ.ಶಿವಕುಮಾರ್