ದೊಡ್ಡಬಳ್ಳಾಪುರ:ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ರೈತರಿಂದ ಜಮೀನು ಸ್ವಾಧೀನ ಮಾಡಿಕೊಂಡ ಕೆಆರ್ಡಿಸಿಎಲ್, ರಸ್ತೆ ಕಾಮಾಗಾರಿ ಪೂರ್ಣಗೊಂಡು ಸುಂಕ ವಸೂಲಿ ಮಾಡುತ್ತಿದೆ. ಆದರೆ ಜಮೀನು ಕಳೆದುಕೊಂಡವರಿಗೆ 5 ವರ್ಷವಾದರು ಪರಿಹಾರ ಸಿಕ್ಕಿಲ್ಲ. ಇದರಿಂದ ನೊಂದ ಜಮೀನು ಮಾಲೀಕ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ನನ್ನ ಸ್ವತ್ತಿನಲ್ಲಿ ಯಾರೂ ಓಡಾಡದಂತೆ ಬೋರ್ಡ್ ಹಾಕಿದ್ದಾರೆ.
ಹೆದ್ದಾರಿಗೆ ಬ್ಯಾರಿಕೇಡ್ ಹಾಕಿದ ಜಮೀನು ಮಾಲೀಕ ಓದಿ: ದ್ವೇಷ ಭಾವನೆ ಮೂಡಿಸುವ ಟ್ವೀಟ್ ಆರೋಪ: ರಾಜ್‌ದೀಪ್ ಸರ್ದೇಸಾಯಿ, ಶಶಿ ತರೂರ್ ವಿರುದ್ಧ ಎಫ್ಐಆರ್!
ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ-9ರ ರಸ್ತೆ ಅಭಿವೃದ್ಧಿಗಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್ಡಿಸಿಎಲ್) 2015ರಲ್ಲಿ ಭೂ ಸಾಧ್ವೀನಕ್ಕಾಗಿ ನೋಟಿಫಿಕೇಷನ್ ಹೊರಡಿಸಿತ್ತು. ಈ ರಸ್ತೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣದ ಮೂಲಕ ಹಾದು ಹೋಗಿದ್ದು, ರಸ್ತೆ ಅಗಲೀಕರಣಕ್ಕಾಗಿ ಬಾಶೆಟ್ಟಿಹಳ್ಳಿ ಗ್ರಾಮದ ಹಲವು ರೈತರ ಜಮೀನು ಸ್ವಾಧೀನಕ್ಕೆ ಒಳಪಟ್ಟಿತ್ತು.
ರಸ್ತೆ ಅಭಿವೃದ್ಧಿಗೆ ತಡೆ ಮಾಡುವುದಾಗಲಿ, ತೊಂದರೆ ನೀಡುವುದಾಗಲಿ ಮಾಡಲೇಬಾರದೆಂದು ನೋಟಿಫಿಕೇಷನ್ನಲ್ಲಿ ಹೇಳಲಾಗಿತ್ತು. ಇದರಿಂದ ಹೆದರಿದ ರೈತರು ರಸ್ತೆ ಅಭಿವೃದ್ಧಿಗೆ ಜಮೀನು ಕೊಡಲು ಒಪ್ಪಿಕೊಂಡರು. ಜೊತೆಗೆ ಮುಚ್ಚಳಿಕೆ ಸಹ ಬರೆದು ಕೊಟ್ಟಿದ್ದರು. ರಸ್ತೆ ಪೂರ್ಣಗೊಂಡು ಕಳೆದ ಎರಡು ವರ್ಷಗಳಿಂದ ಟೋಲ್ ಸುಂಕ ಸಹ ವಸೂಲಿ ಮಾಡಲಾಗುತ್ತಿದೆ. ಭೂ ಸ್ವಾಧೀನವಾಗಿ 5 ವರ್ಷಗಳಾದರೂ ಜಮೀನು ಕಳೆದುಕೊಂಡ ರೈತರಿಗೆ ಮಾತ್ರ ಪರಿಹಾರ ಸಿಕ್ಕಿಲ್ಲವಂತೆ.
ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ಬಾಶೆಟ್ಟಿಹಳ್ಳಿ ಪಟ್ಟಣದ ಜೆ.ಎಸ್.ಉಮಾಶಂಕರ್ ಎಂಬುವರ 6 ಗುಂಟೆ ಜಾಗ ಸ್ವಾಧೀನವಾಗಿದೆ. ಭೂ ಸ್ವಾಧೀನದಿಂದ ಪರಿಹಾರದ ಹಣ ಬರುತ್ತೆ ಎಂಬ ಧೈರ್ಯದಲ್ಲಿ ಬ್ಯಾಂಕ್ನಿಂದ ಸಾಲ ತಂದು ಹೆದ್ದಾರಿ ಬದಿಯಲ್ಲಿ ಹೋಟೆಲ್ ಆರಂಭಿಸಿದ್ದಾರೆ. ಆದರೆ ಕೋವಿಡ್-19 ಹಿನ್ನೆಲೆ ಹೋಟೆಲ್ ಉದ್ಯಮ ನೆಲಕಚ್ಚಿತು. ಇದೀಗ ಭೂ ಸ್ವಾಧೀನವಾಗಿ 5 ವರ್ಷವಾದರೂ ಪರಿಹಾರ ಹಣ ಕೈಗೆ ಸಿಕ್ಕಿಲ್ಲ. ಸಾಲದ ಕಂತು ಕಟ್ಟುವಂತೆ ಬ್ಯಾಂಕ್ನಿಂದ ನೋಟಿಸ್ಗಳು ಬರುತ್ತಿವೆ. ಇದರಿಂದ ನೊಂದ ಉಮಾಶಂಕರ್ ಹೆದ್ದಾರಿಗಾಗಿ ಭೂ ಸ್ವಾಧೀನವಾದ ತಮ್ಮ ಜಾಗದಲ್ಲಿ ಹೆದ್ದಾರಿಗೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿದ್ದಾರೆ. ಈ ಜಾಗವನ್ನು ಸ್ವಾಧೀನಗೊಳಿಸಿಕೊಳ್ಳಲು ಹಣ ನೀಡದೆ ತಮ್ಮ ಸ್ವಂತ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಿರುವುದರಿಂದ ನಮ್ಮ ಜಾಗದಲ್ಲಿ ಯಾರೂ ಓಡಾಡಬಾರದೆಂದು ಬೋರ್ಡ್ ಹಾಕಿದ್ದಾರೆ.
ಪರಿಹಾರದ ಹಣಕ್ಕಾಗಿ ಕೆಆರ್ಡಿಸಿಎಲ್ ಅಧಿಕಾರಿಗಳನ್ನು ಕೇಳಿದರೆ, ಸರ್ಕಾರ ನಮಗೆ ಸಂಬಳ ಕೊಟ್ಟಿಲ್ಲವೆಂದು ಹೇಳುತ್ತಾರಂತೆ. ಸದ್ಯ ಈ ಜಾಗದ ಮಾರುಕಟ್ಟೆ ದರ ಒಂದು ಗುಂಟೆಗೆ 25ರಿಂದ 35 ಲಕ್ಷ ಬೆಲೆ ಬಾಳುತ್ತೆ. ಆದರೆ ಕೆಆರ್ಡಿಸಿಎಲ್ ಪ್ರತಿ ಗುಂಟೆ ಜಾಗಕ್ಕೆ 6 ಲಕ್ಷ ಪರಿಹಾರ ನೀಡುವುದಾಗಿ ಹೇಳುತ್ತಿದೆ. ಸಮೀಪದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಅಭಿವೃದ್ಧಿಗಾಗಿ ರೈತರರಿಂದ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನೂ ರಸ್ತೆಯೇ ನಿರ್ಮಾಣವಾಗಿಲ್ಲ, ಆಗಲೇ ರೈತರಿಗೆ ಪರಿಹಾರದ ಹಣ ಸಿಕ್ಕಿದೆ. ನಾವೇನು ರೈತರಲ್ವಾ ಎಂದು ಕೆಆರ್ಡಿಸಿಎಲ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.