ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಕಾಚನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಮಾಡಿದ್ದಾರೆ.
ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದ ಎಸ್ಪಿ ಚನ್ನಣ್ಣನವರ್... ವಿದ್ಯಾರ್ಥಿಗಳಿಗೆ ಸಮಾನತೆಯ ಪಾಠ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಕಾಚನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಏಳನೇ ತರಗತಿ ಮಕ್ಕಳಿಗೆ ಸಾಮಾನ್ಯಜ್ಞಾನ ಕುರಿತು ಪ್ರಶ್ನೆಗಳನ್ನು ಕೇಳಿದ್ರು. ಈ ವೇಳೆ ತಾವು ಕೂಡ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾಗಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ನೆಲಮಂಗಲ ತಾಲೂಕಿನ ಕಾಚನಹಳ್ಳಿಯಲ್ಲಿ ದಲಿತರು ಡಂಗೂರ ಸಾರುವ ವಿಚಾರಕ್ಕೆ ಸವರ್ಣಿಯರು ಮತ್ತು ದಲಿತರ ನಡುವೆ ಮಾರಾಮಾರಿ ನಡೆದಿತ್ತು. ಈ ಹಿನ್ನೆಲೆ ಕಾಚನಹಳ್ಳಿ ಗ್ರಾಮಕ್ಕೆ ಪ್ರಕರಣ ವಿಚಾರಣೆಗೆಂದು ಆಗಮಿಸಿದ್ದ ಎಸ್ಪಿ ಚೆನ್ನಣ್ಣನವರ್ ಪಕ್ಕದಲ್ಲೇ ಇದ್ದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಏಳನೇ ತರಗತಿ ವಿದ್ಯಾರ್ಥಿಗಳಿಗೆ ಸಾಮಾನ್ಯಜ್ಞಾನದ ಪ್ರಶ್ನೆಗಳನ್ನು ಕೇಳಿದ್ರು. ಅಲ್ಲದೆ, ತಾವು ಕೂಡ ಸರ್ಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡಿದ್ದಾಗಿ ತಿಳಿಸಿದ್ರು. ವಿದ್ಯೆ ಮನುಷ್ಯನ ಆಸ್ತಿ, ಯಾರಿಂದಲೂ ಇದನ್ನು ಕದಿಯಲು ಸಾಧ್ಯವಿಲ್ಲ. ಹಾಗಾಗಿ ಎಲ್ಲಾ ಮಕ್ಕಳು ವಿದ್ಯಾವಂತರಾಗಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಹಾಗೆಯೇ ಇಲ್ಲಿ ಯಾರು ಮೇಲೂ, ಯಾರೂ ಕೀಳಲ್ಲ. ಭಾರತಕ್ಕೆ ಸಂವಿಧಾನದ ಕೊಟ್ಟ ಅಂಬೇಡ್ಕರ್ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಹೇಳಿದ್ದಾರೆ. ಹಾಗೆಯೇ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿದ್ದಾರೆಂದು ಮಕ್ಕಳಿಗೆ ನೀತಿ ಬೋಧನೆ ಮಾಡಿದರು. ಎಸ್ಪಿಯವರು ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.