ಬೆಂಗಳೂರು: ಹೊಸಕೋಟೆ ಕ್ಷೇತ್ರದ ಉಪಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇವಿಎಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.
ರಾಜ್ಯದ ಹೈವೊಲ್ಟೆಜ್ ಕ್ಷೇತ್ರವಾಗಿದ್ದ ಹೊಸಕೋಟೆ ಉಪಚುನಾವಣಾ ಮತದಾನ ಇಂದು ಮುಕ್ತಾಯಗೊಂಡಿದೆ. ಇನ್ನೂ ಹೊಸಕೋಟೆಯಲ್ಲಿ ಮೂವರು ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟಿದ್ದು, ಶಾಂತಿಯುತವಾಗಿ ಮತದಾನ ನಡೆದಿದೆ. ಅದರಲ್ಲೂ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ತಾವು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಮತದಾನ ಹಕ್ಕನ್ನ ಕಳೆದುಕೊಂಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿರುವ ಶರತ್ ಬಚ್ಚೇಗೌಡ ಹೊಸಕೋಟೆ ನಗರದ ಬಾಲಕರ ಪ್ರೌಢಶಾಲೆಯಲ್ಲಿ ಪತ್ನಿ ಪ್ರತಿಭಾ ಜತೆ ಆಗಮಿಸಿ ತಮ್ಮ ಹಕ್ಕನ್ನ ಚಲಾಯಿಸಿದ್ರು.
ಹೊಸಕೋಟೆ ಉಪಚುನಾವಣಾ ಕಣ...ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ.... ಇನ್ನೂ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಕ್ಷೇತ್ರದಾದ್ಯಂತ ಬೂತ್ ಗಳಿಗೆ ಭೇಟಿ ನೀಡಿ ಮತದಾನದ ಪ್ರಕ್ರಿಯೆ ಹಾಗೂ ಮುಖಂಡರ ಜತೆ ಮಾಹಿತಿಯನ್ನ ಪಡೆದುಕೊಂಡ್ರು. ಅಲ್ಲದೆ ಹೊಸಕೋಟೆಯ ಬೆಂಡಿಗಾನಹಳ್ಳಿಗೆ ಎಂಟಿಬಿ ಭೇಟಿ ನೀಡಿದ್ದ ವೇಳೆ ಪಕ್ಷೇತರ ಅಭ್ಯರ್ಥಿ ಏಜೆಂಟ್ಗಳನ್ನು ಇವಿಎಂ ಪಕ್ಕದಲ್ಲಿ ಕೂರಿಸಿದ ಚುನಾವಣಾ ಅಧಿಕಾರಿಗಳ ವಿರುದ್ದ ಗರಂ ಆದ್ರು. ಅಲ್ಲದೆ ಸಂಸದ ಬಚ್ಚೇಗೌಡರ ವಿರುದ್ಧ ಎಂಟಿಬಿ ಕಿಡಿಕಾರಿದ್ದು, ನಾಳೆಯಿಂದ ಪಕ್ಷದ ಪರ ಕೆಲಸ ಮಾಡದ ಸಂಸದರ ವಿರುದ್ಧ ದ್ವನಿ ಎತ್ತುವೆ ಎಂದ್ರು.
ಇನ್ನೂ ಉಪಚುನಾವಣೆ ಪ್ರಚಾರದಲ್ಲೆ ಕಾಣಿಸಿಕೊಳ್ಳದ ಸಂಸದ ಬಚ್ಚೇಗೌಡ ಮೂರು ಗಂಟೆ ಸುಮಾರಿಗೆ ಹೊಸಕೋಟೆ ಟೌನ್ನ ಮತಗಟ್ಟೆ 160 ರಲ್ಲಿ ಆಗಮಿಸಿ ತಮ್ಮ ಹಕ್ಕನ್ನ ಚಲಾಯಿಸಿ ಮಾಧ್ಯಮಗಳ ಕಣ್ತಪ್ಪಿಸಿ ಪ್ರತಿಕ್ರಿಯೆ ನೀಡದೇ ಹೊರಟೇ ಹೋದ್ರು. ಮತ್ತೊಂದು ಕಡೆ ಅಲ್ಲಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿ ಶರತ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಇದರ ನಡುವೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನ ಹತೋಟಿಗೆ ತಂದ್ರು.
ಜತೆಗೆ ಮತದಾನ ಪ್ರಕ್ರಿಯೆಯಲ್ಲಿ ತಾಲೂಕಿನ ಭುವನಹಳ್ಳಿ ಗ್ರಾಮದ ಬೂತ್ ಇವಿಎಂ ಯಂತ್ರ ತಾಂತ್ರಿಕ ದೋಷದಿಂದ ಎರಡು ಗಂಟೆಗಳ ಕಾಲ ಸ್ಥಗಿತಗೊಂಡು ಮತದಾರರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ರು. ಸಂಜೆ ಐದು ಗಂಟೆ ವೇಳೆಗೆ ಶೇ. 76 ರಷ್ಟು ಮತದಾನವಾಗಿದ್ದು, ಯಾವುದೇ ಶಾಂತಿಗೆ ಭಂಗವಾಗದಂತೆ ಮತದಾನ ಮುಕ್ತಾಯಗೊಂಡಿದೆ. ಒಟ್ಟಿನಲ್ಲಿ ತೀವ್ರ ಕೂತೂಹಲ ಮೂಡಿಸಿದ್ದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಮತದಾನ ಪೂರ್ಣಗೊಂಡಿದ್ದು, ಅಭ್ಯರ್ಥಿ ಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.