ಹೊಸಕೋಟೆ/ಬೆಂಗಳೂರು:ಸಚಿವ ಎಂಟಿಬಿ ನಾಗರಾಜ್ ತಮ್ಮ ಸ್ವಂತ ಹಣದಿಂದ ಕಳೆದ ಒಂದು ವಾರದಿಂದ ಹೊಸಕೋಟೆ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಮತ್ತು ಅನಾಥಾಶ್ರಮಗಳಿಗೆ ರೇಷನ್ ಕಿಟ್ಗಳನ್ನು ವಿತರಿಸುತ್ತಿದ್ದಾರೆ. ಇಂದು ತಾಲೂಕಿನ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ರೇಷನ್ ಕಿಟ್ ವಿತರಣೆ ಮಾಡಲಾಗುತ್ತಿದ್ದು, ಸಾವಿರಕ್ಕೂ ಹೆಚ್ಚು ಆಟೋ ಮತ್ತು ಟ್ಯಾಕ್ಸಿ ಚಾಲಕರು ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಸೇರಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಕ್ರೀಡಾಂಗಣದ ಒಳಗೆ 400ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲಾಗಿದೆ. ಆದರೆ ಕ್ರೀಡಾಂಗಣದ ಹೊರಗೆ ನೂರಾರು ವಾಹನಗಳು ಕ್ರೀಡಾಂಗಣದೊಳಗೆ ಹೋಗಲು ಮುಗಿಬಿದ್ದಿದ್ದಾರೆ. ಕೆ.ಬಿ ಸರ್ಕಲ್ವರೆಗೂ ಆಟೋಗಳನ್ನು ನಿಲ್ಲಿಸಲಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ತಾಲೂಕಿನಲ್ಲಿರುವ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳು ಹೊಸಕೋಟೆ ನಗರ ಭಾಗದಲ್ಲಿ ಬೀಡುಬಿಟ್ಟಿದೆ. ಸುಮಾರು 1200ಕ್ಕೂ ಹೆಚ್ಚು ಆಹಾರ ಕಿಟ್ಗಳನ್ನು ತಯಾರು ಮಾಡಿದ್ದು, ಸ್ವತಃ ಸಚಿವ ಎಂಟಿಬಿ ನಾಗರಾಜ್ ಅವರೇ ವಿತರಣೆ ಮಾಡುತ್ತಿದ್ದಾರೆ. ದಿನಸಿ ಕಿಟ್ಗಳನ್ನು ಪಡೆಯಲು ವಾಹನ ಸಮೇತ ಬಂದರೆ ಮಾತ್ರ ನೀಡುವುದಾಗಿ ಹೇಳಿರುವುದರಿಂದ ಕ್ರೀಡಾಂಗಣ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ.
ಮಾಂಸ ಕೊಳ್ಳಲು ಮುಗಿಬಿದ್ದ ಜನತೆ:
ನಗರದಲ್ಲಿ ಎಲ್ಲೆಲ್ಲೂ ಜನಜಂಗುಳಿ ಕಂಡು ಬಂದಿದೆ. ಭಾನುವಾರದ ಬಾಡೂಟವನ್ನು ತಮ್ಮ ಮನೆಗಳಲ್ಲಿ ಸವಿಯಲು ಜನರು ಮಾಂಸ ಕೊಳ್ಳಲು ಸೇರಿದ್ದಾರೆ.
ಯಶವಂತಪುರ, ಶಿವಾಜಿನಗರದಲ್ಲಿಯೂ ಜನಜಂಗುಳಿ:
ಭಾನುವಾರದ ಬಾಡೂಟಕ್ಕೆ ಯಶವಂತಪುರ ಹಾಗೂಶಿವಾಜಿನಗರದ ಜನರು ಚಿಕನ್, ಮಟನ್, ಫಿಶ್ ಖರೀದಿಗೆ ಜಮಾಯಿಸಿದ್ದರು. ಬೆಳ್ಳಂ ಬೆಳ್ಳಗ್ಗೆಯೇ ಸಣ್ಣ ಪುಟ್ಟ ರಸ್ತೆಗಳಲ್ಲು ತುಂಬಿದ್ದ ಜನ ತರಕಾರಿ, ಹಣ್ಣು ಖರೀದಿಯಲ್ಲಿ ನಿರತರಾಗಿದ್ದರು.