ನೆಲಮಂಗಲ(ಬೆಂಗಳೂರು):ಎತ್ತಿನಹೊಳೆ ಯೋಜನೆಗೆ ಎಲ್ಲ ಸಿದ್ಧತೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರು ಯೋಜನೆಗೆ ಬಜೆಟ್ನಲ್ಲಿ ಹಣ ಕೊಟ್ಟಿದ್ದಾರೆ. ಈ ವರ್ಷ ಅದಕ್ಕೆ 3 ಸಾವಿರ ಕೋಟಿ, ಮುಂದಿನ ವರ್ಷ 3 ಸಾವಿರ ಕೋಟಿ ನೀಡಲಾಗುತ್ತದೆ. 2026ರ ವೇಳೆಗೆ ನೂರಕ್ಕೆ ನೂರ ರಷ್ಟು ಎತ್ತಿನಹೊಳೆ ಯೋಜನೆ ಪೂರ್ಣಗೊಂಡು ಈ ಭಾಗದ ಜನರಿಗೆ ಒಳ್ಳೆಯ ಕುಡಿಯುವ ನೀರು ಲಭ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪಟ್ಟಣದ ಮಾರುತಿ ಕಾಂಪ್ಲೆಕ್ಸ್ನಲ್ಲಿ ನಿರ್ಮಿಸುತ್ತಿರುವ ನೂತನ ಕಾಂಗ್ರೆಸ್ ಕಚೇರಿ ವೀಕ್ಷಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಎಐಸಿಸಿನಲ್ಲಿ ಮೋದಿ ಹೇಳಿದ ಹಾಗೆ ಆಗುವುದಿಲ್ಲ. ನಮ್ಮ ಪಕ್ಷದಲ್ಲಿ ಸಾಂಘಿಕವಾಗಿ ಶಾಸಕರ ಅಭಿಪ್ರಾಯ ತೆಗೆದುಕೊಂಡು ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಹೈಕಮಾಂಡ್ ನಿರ್ಧಾರ ಮಾಡಿದ್ದಾರೆ. ಸದ್ಯ ಅವರೇ ಮುಖ್ಯಮಂತ್ರಿ ಎಂದರು. ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆಯುವುದು ಗ್ಯಾರಂಟಿ ಇಲ್ಲ ಎಂದು ಪ್ರಧಾನಿ ನೆರೇಂದ್ರ ಮೋದಿ ಹೇಳಿಕೆ ಪ್ರತಿಕ್ರಿಯಿಸಿ, 2024ರ ಮೇಲೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಗ್ಯಾರಂಟಿಯಾ? ಎಂದು ಪ್ರಶ್ನಿಸಿದರು.
ಐದು ಗ್ಯಾರಂಟಿಗಳನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೆವು, ಐದರಲ್ಲಿ ನಾಲ್ಕನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ಯುವನಿಧಿ ಯೋಜನೆ ಅಗತ್ಯವಾದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಜನವರಿಯಿಂದ ಈ ಯೋಜನೆ ಅನುಷ್ಠಾನ ಆಗುತ್ತದೆ ಎಂದರು.