ಕರ್ನಾಟಕ

karnataka

ETV Bharat / state

ಮೇ 26ರಿಂದ ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಲು ನಿರ್ಧಾರ: ಸಚಿವ ಗೋಪಾಲಯ್ಯ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಪ್ಯಾಕೇಜ್ 2ರ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರ ವಹಿಸಿಕೊಂಡಿದ್ದು, ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್​ನಲ್ಲಿ ಆಹಾರ ಧಾನ್ಯಗಳನ್ನ ವಿತರಿಸಲಾಗುವುದು ಎಂದು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

Minister Gopalyya
ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಲು ನಿರ್ಧಾರ: ಸಚಿವ ಗೋಪಾಲಯ್ಯ

By

Published : May 18, 2020, 9:21 PM IST

ಬೆಂಗಳೂರು: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ 2ನೇ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ವಲಸೆ ಕಾರ್ಮಿಕರಿಗೆ ಮೇ ಮತ್ತು ಜೂನ್ ತಿಂಗಳಿ​ನಲ್ಲಿ ಆಹಾರ ಧಾನ್ಯಗಳನ್ನ ವಿತರಿಸಲು ನಿರ್ಧಾರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಲಸೆ ಕಾರ್ಮಿಕರಿಗೆ ಇದೇ ತಿಂಗಳ 26 ರಿಂದ 31ರವರೆಗೆ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ನಿರ್ಧರಿಸಿದ್ದು, ಜೂನ್ 1 ರಿಂದ 10 ರವರೆಗೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಮತ್ತು ಪ್ರತಿ ಕುಟುಂಬಕ್ಕೆ 2 ಕೆಜಿ ಕಡಲೆಕಾಳು ಉಚಿತವಾಗಿ ನೀಡಲಾಗುತ್ತದೆ ಎಂದರು.

ಇನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಪ್ಯಾಕೇಜ್ 2ರ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರ ವಹಿಸಿಕೊಂಡಿದೆ. ಇದಕ್ಕೆ 40.193 ಮೆಟ್ರಿಕ್ ಟನ್ ಅಕ್ಕಿ ಹಾಗೂ 2,544 ಟನ್ ಕಡಲೆಕಾಳು ಅವಶ್ಯಕತೆಯಿದ್ದು, ಇದರಲ್ಲಿ ಏನಾದರೂ ಕಡಿಮೆಯಾದರೆ ಕೇಂದ್ರದಿಂದ ಕಳುಹಿಸಿ ಕೊಡಲಾಗುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದರು.

ಫೋನ್​ನಲ್ಲಿ ಕೇಂದ್ರ ಆಹಾರ ಸಚಿವರ ಬಳಿ ಈ ಕುರಿತು ಈಗಾಗಲೇ ಮಾತನಾಡಿದ್ದೇನೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಕಷ್ಟಕ್ಕೆ ಸ್ಪಂದಿಸುತ್ತಿರುವ ಅವರಿಗೆ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದರು.

ಇನ್ನು ವಲಸೆ ಕಾರ್ಮಿಕರನ್ನು ಗುರುತಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದ್ದು ನಮ್ಮ ರಾಜ್ಯದಲ್ಲಿ 40.19 ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಅವರೆಲ್ಲರು ಈ ಪ್ಯಾಕೇಜ್ 2ರ ಪ್ರಯೋಜನವನ್ನು ಪಡೆದುಕೊಳ್ಳಲ್ಲಿದ್ದಾರೆ. ಪ್ರಧಾನಮಂತ್ರಿ ಗರೀಬ್ ಅನ್ನ ಯೋಜನೆಯ ಪ್ಯಾಕೇಜ್ -2ರ ಪ್ರಯೋಜನವನ್ನು ಪಡೆದುಕೊಳ್ಳಲು ವಲಸೆ ಕಾರ್ಮಿಕರಲ್ಲಿ ಈ ಮಾನದಂಡಗಳನ್ನ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು.

ವಲಸೆ ಕಾರ್ಮಿಕರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದವರಾಗಿರಬೇಕು. ಇವರು ಯಾವುದೇ ಅಂತ್ಯೋದಯ/ಬಿಪಿಎಲ್/ ಎಪಿಎಲ್/ಕಾರ್ಡ್ ಹೊಂದಿರಬಾರದು. ಇವರು ಸ್ವಂತ ಮನೆ ಹೊಂದಿರಬಾರದು ಹಾಗೂ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇನ್ನು ಪಡಿತರವನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುವುದು.‌ ಬೆಂಗಳೂರಿನಲ್ಲಿ ಬಿ.ಬಿ.ಎಂ.ಪಿ ಅಥವಾ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಪಡಿತರ ವಿತರಿಸಲಾಗುವುದು ಎಂದರು.

ABOUT THE AUTHOR

...view details