ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಆನೇಕಲ್(ಬೆಂಗಳೂರು ಗ್ರಾಮಾಂತರ): ರಾಜ್ಯದಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪಿಯ ವಿಚಾರಣೆ ನಡೆಸಿದಾಗ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಬರ್ಬರ ಕೊಲೆ ಪ್ರಕರಣ ಸಂಬಂಧ ಬಿಹಾರ ಮೂಲದ ಕೊಲೆ ಆರೋಪಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಜೂನ್ 4ರಂದು ಬಿಹಾರದಲ್ಲಿ ಆರೋಪಿ ಇಂದಲ್ ಕುಮಾರ್‌ನನ್ನು ಪಿಎಸ್ಐ ಸಿದ್ದನಗೌಡ ವಶಕ್ಕೆ ಪಡೆದು ಜೂ.7ರಂದು ರಾಜ್ಯಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದರು. ಆನೇಕಲ್ ತಾಲೂಕಿನ ಬನ್ನೇರುಘಟ್ಟ ನಿವಾಸಿ ಜನತಾ ಕಾಲೊನಿಯ ಗೀತಮ್ಮ(53) ಮೃತ ಮಹಿಳೆ.
ಈ ಕುರಿತು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಜನತಾ ಕಾಲೊನಿಯ ಕಾಂಪೌಂಡು ಸಮೀಪ ಕೈ ಕಾಲು ರುಂಡ ಕತ್ತರಿಸಿ ದೇಹ ಎಸೆದಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆಯಾದ ಗೀತಮ್ಮ ಮನೆಯಲ್ಲಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ರಾಜ್ಯದ ಯುವಕರು ಬಾಡಿಗೆ ಇದ್ದರು. ಆ ಯುವಕರು ಮೂರ್ನಾಲ್ಕು ದಿನಗಳಿಂದ ಕಾಣಿಸುತ್ತಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ತನಿಖೆಯನ್ನು ಮಾಡಲಾಗಿ ಆರೋಪಿಗಳು ಬಿಹಾರ ರಾಜ್ಯದಲ್ಲಿ ಇದ್ದಾರೆ ಎಂಬುದು ತಿಳಿದಿತ್ತು.
ಇದನ್ನು ಆಧರಿಸಿ ಬನ್ನೇರುಘಟ್ಟ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದನಗೌಡ ಮತ್ತು ಅವರ ತಂಡ ಬಿಹಾರದ ರಾಜ್ಯದ ಔರಂಗಾಬಾದ್ನ ಒಂದು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಇಂದಲ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಲು ಮುಂದಾಗುತ್ತಾರೆ. ಅ ಸಮಯದಲ್ಲಿ ಆತನ ಬೆಂಬಲಿಗರು ಮತ್ತು ಸ್ಥಳೀಯರು ಆರೋಪಿಯನ್ನು ಬಂಧಿಸುವಾಗ ಪ್ರತಿರೋಧ ತೋರುತ್ತಾರೆ. ಅಷ್ಟಾದರೂ ನಮ್ಮ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಆತನನ್ನು ಬಂಧಿಸಿ ಅಲ್ಲಿನ ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿ, ಅಲ್ಲಿಂದ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದರು.
ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಒಟ್ಟು 7 ಜನ ಆರೋಪಿತರು ಕೊಲೆಯಾದ ಗೀತಮ್ಮ ಮನೆಯಲ್ಲಿ ಮತ್ತು ಅಲ್ಲೇ ಪಕ್ಕ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಮುಖ್ಯ ಆರೋಪಿ ಪಂಕಜ್ ಕುಮಾರ್ ಬಹಳಷ್ಟು ವರ್ಷಗಳಿಂದ ಗೀತಮ್ಮ ಮನೆಯಲ್ಲಿ ವಾಸವಾಗಿದ್ದ ಎಂದು ತಿಳಿಸಿದರು.
ಈತ ಗೀತಮ್ಮನೊಂದಿಗೆ ಅನ್ಯೋನ್ಯವಾಗಿದ್ದರಿಂದ ಬಾಡಿಗೆ ಮನೆಗಳನ್ನು ನನ್ನ ಹೆಸರಿಗೆ ಬರೆದುಕೊಡು ಎಂದು ಪೀಡಿಸುತ್ತಿದ್ದ. ಇದಕ್ಕೆ ಒಪ್ಪದ ಗೀತಮ್ಮರನ್ನು ಮೇ 27ರಂದು ಪಂಕಜ್ ಎಂಬುವವನು ಇತರರೊಂದಿಗೆ ಸೇರಿಕೊಂಡು ಮೊಬೈಲ್ ವೈರ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಇಲ್ಲಿಯೇ ಬಿಟ್ಟರೇ, ಎಲ್ಲರಿಗೂ ವಿಷಯ ತಿಳಿಯುತ್ತದೆ ಎಂದು ಮೃತ ದೇವಹವನ್ನು ಯಾರಿಗೂ ಗುರುತು ಸಿಗದಂತೆ ಮಾಡಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಇದರ ಭಾಗವಾಗಿ ದೇಹವನ್ನು ಬೇರೆಡೆಗೆ ಇಡಿಯಾಗಿ ಸಾಗಿಸಲು ಕಷ್ಟವಾಗುವುದರಿಂದ ಆಕ್ಸೆಲ್ ಬ್ಲೇಡ್ನಿಂದ ತಲೆ, ಕೈ ಕಾಲುಗಳನ್ನು ಬೇರ್ಪಡಿಸಿ ಬೇರೆ ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ದೇಹ ತುಂಬ ಭಾರವಾಗಿದ್ದರಿಂದ ಅದನ್ನು ಸಮೀಪದ ಕಾಂಪೌಂಡ್ ಬಳಿ ಎಸೆದು ಅಲ್ಲಿಂದ ಅವರು ಪರಾರಿಯಾಗಿರುತ್ತಾರೆ ಎಂದು ತಿಳಿಸಿದರು. ಬನ್ನೇರುಘಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಉಮಾಶಂಕರ್ ನೇತೃತ್ವದ ತಂಡ, ಎಎಸ್ಪಿ ಮತ್ತು ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪ್ರಕರಣವನ್ನು ತ್ವರಿತವಾಗಿ ಭೇದಿಸುವಲ್ಲಿ ಯಶಸ್ವಿಯಾಗಿದೆ. ಇವರಿಗೆ ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿ, ಪ್ರಶಂಸನಾ ಪತ್ರವನ್ನು ನೀಡಲಾಗುತ್ತದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಇದನ್ನೂ ಓದಿ:ಡೇಟಿಂಗ್ ಆ್ಯಪ್ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವತಿಗೆ ವಂಚನೆ: ಆರೋಪಿ ಬಂಧನ