ಬೆಂಗಳೂರು:ಪ್ರಥಮ ವರ್ತಮಾನ ವರದಿ(ಎಫ್‌ಐಆರ್) ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಹಲಸೂರು ಗೇಟ್ ಎಸಿಪಿ ನಜ್ಮಾ ಫಾರೂಖಿ ವಿರುದ್ಧ ಡಿಜಿ, ಐಜಿಪಿ ಪ್ರವೀಣ್ ಸೂದ್ಗೆ ಇಮ್ರಾನ್ ಷರೀಫ್ ಎಂಬುವರು ದೂರು ನೀಡಿದ್ದಾರೆ. ಇಮ್ರಾನ್ ಷರೀಫ್ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದರೂ, ಎಸಿಪಿ ನಜ್ಮಾ ಎಫ್ಐಅರ್ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ನಗರದ ಎಸ್ಪಿ ರಸ್ತೆ ನಿವಾಸಿಯಾಗಿರುವ ಉದ್ಯಮಿ ಇಮ್ರಾನ್ ಷರೀಫ್ ಅವರ ಸಹೋದರ ಇನಾಯಿತ್ ಷರೀಫ್ ಬಳಿ ಫೈಝಲ್ ಎಂಬಾತ 7.5 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಆದರೆ, ಸಾಲ ವಾಪಸ್ ನೀಡದೆ ಫೈಝಲ್ ಸತಾಯಿಸುತ್ತಿದ್ದ. ಮೇ 15 ರಂದು ಬೆಳಗ್ಗಿನ ಜಾವ ಹಣ ಹಿಂತಿರುಗಿ ಕೊಡುವುದಾಗಿ ಫೈಝಲ್ ಕರೆ ಮಾಡಿದ್ದ. ಹಣ ಪಡೆದುಕೊಳ್ಳಲು ಅಣ್ಣ ಇನಾಯತ್ ಬದಲಾಗಿ ಇಮ್ರಾನ್ ಅವರು ಹೋಗಿದ್ದರು.