ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) : ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆಯ ವೇಳೆ ಮಗು ಸಾವನ್ನಪ್ಪಿದೆ. ಘಟನೆಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದಿರುವ ಪೋಷಕರು ನ್ಯಾಯಕ್ಕಾಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ದೇವನಹಳ್ಳಿಯ ಪುಟ್ಟಪ್ಪನಗುಡಿ ಬೀದಿ ಪುನೀತ್ ಹಾಗೂ ಲಕ್ಷ್ಮೀ ದಂಪತಿ ಮಗು ಸಾವಿಗೀಡಾಗಿದೆ.
ಕಳೆದ ಹತ್ತು ದಿನಗಳ ಹಿಂದೆ ಲಕ್ಷ್ಮಿ ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವೈದ್ಯರಿಲ್ಲದೆ, ಅಲ್ಲಿದ್ದ ನರ್ಸ್ ನಾವೇ ಹೆರಿಗೆ ಮಾಡಿಸುತ್ತೇವೆ ಎಂದು ಹೆರಿಗೆ ಮಾಡಿಸಿದ್ದಾರೆ. ಬಳಿಕ ಮಗುವಿಗೆ ಉಸಿರಾಟ ಸಮಸ್ಯೆ ಎದುರಾಗಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗೆ ರವಾನಿಸಿದ್ದು, ವೆಂಟಿಲೇಟರ್ ಮೂಲಕ ಮಗು ಹತ್ತು ದಿನ ಕಳೆದಿದ್ದು, ಸೋಮವಾರ ಸಾವನ್ನಪ್ಪಿದೆ. ಹೀಗಾಗಿ ಸರ್ಕಾರಿ ವೈದ್ಯರ ನಿರ್ಲಕ್ಷ್ಯಕ್ಕೆ ನಮ್ಮ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಮಗುವಿನ ಸಂಬಂಧ ಪುಷ್ಪ ಮಾತನಾಡಿ, ನಾವು ಸ್ಕ್ಯಾನ್ ಮಾಡಿಸಿ ಬಂದಿರುವ ರಿಪೋರ್ಟ್ನಲ್ಲಿ ಮಗುವಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಹೆರಿಗೆ ಸಂದರ್ಭದಲ್ಲಿ ಮಗುವಿಗೆ ಎರಡು ಕರಳು ಸುತ್ತಿಕೊಂಡಿತ್ತು ಎಂದು ಇಲ್ಲಿನ ನರ್ಸ್ ಹೇಳುತ್ತಿದ್ದಾರೆ. ಇದನ್ನೂ ನಂಬಲು ಹೇಗೆ ಸಾಧ್ಯ? ಇಲ್ಲಿನ ವ್ಯವಸ್ಥೆ ನೋಡಿ ನಾವು ಬೇರೆ ಆಸ್ಪತ್ರೆಗೆ ಹೆರಿಗೆಗೆ ಹೋಗುತ್ತೇವೆ ಎಂದು ಹೇಳಿದ್ದೆವು. ಆದರೆ, ನಮ್ಮನ್ನು ಬೇರೆ ಕಡೆ ಕಳುಹಿಸಲು ಒಪ್ಪಲಿಲ್ಲ. ವಾರ್ಡ್ನಲ್ಲಿ ಒಬ್ಬರನ್ನೂ ಬಿಡದೆ ಆಚೆ ಕಳುಹಿಸಿ, ಹೆರಿಗೆ ವೇಳೆ ಹೊಟ್ಟೆಯ ಭಾಗವನ್ನು ಬಲವಾಗಿ ಒತ್ತಿದ್ದಾರೆ. ಇದರಿಂದಲೇ ಮಗು ಸಾವನ್ನಪ್ಪಿದೆ. ನಮ್ಮ ಮಗುವಿಗೆ ಆಗಿರೋ ಪರಿಸ್ಥಿತಿ ಯಾರಿಗೂ ಆಗಬಾರದು. ಈ ಕೂಡಲೇ ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.