ದೇವನಹಳ್ಳಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಹಾಗೂ ಮತ ಎಣಿಕೆ ಕಾರ್ಯಕ್ಕೆ ಅಗತ್ಯವಿರುವ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್. ಲತಾ ತಿಳಿಸಿದ್ದಾರೆ. ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 4,35,835 ಪುರುಷ ಮತದಾರರು, 4,41,907 ಮಹಿಳಾ ಮತದಾರರು ಹಾಗೂ 148 ಇತರೆ ಮತದಾರರು ಸೇರಿದಂತೆ ಒಟ್ಟು 8,77,890 ಮತದಾರರು ಇದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 130 ಸೇವಾ ಮತದಾರರು, ಒಟ್ಟು 24713 ಯುವ ಮತದಾರರು, 12143 ವಿಶೇಷಚೇತನ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 20354 ಮತದಾರರಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಮತದಾರರಿಗೂ ಮತದಾರರ ಮಾರ್ಗದರ್ಶಿ ಮತ್ತು ವೋಟರ್ ಇನ್ಫಾರ್ಮೇಶನ್ ಸ್ಲಿಪ್ ಅನ್ನು ಶೇಕಡ ನೂರರಷ್ಟು ವಿತರಿಸಲಾಗಿದೆ. ಜಿಲ್ಲೆಯ ಎಲ್ಲಾ ಮತದಾರರರು ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ, 50 ಪುರುಷರು ಹಾಗೂ 06 ಮಹಿಳೆಯರು ಸೇರಿದಂತೆ ಒಟ್ಟು 56 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟಾರೆ 1137 ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ 879 ಹಾಗೂ ಗ್ರಾಮೀಣ ಪ್ರದೇಶದಲ್ಲಿ 258 ಮತಗಟ್ಟೆಗಳಿವೆ. ಜಿಲ್ಲೆಯ 1137 ಮತಗಟ್ಟೆಗಳಿಗೆ 1470 ಪಿಆರ್ಓ, 1499 ಎಪಿಆರ್ಓ, 2929 ಪಿಓ ಹಾಗೂ 285 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 1137 ಮತಗಟ್ಟೆಗಳ ಪೈಕಿ 569 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುವುದು ಎಂದು ತಿಳಿಸಿದರು.
178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೊಸಕೋಟೆ ಟೌನ್‌ನ ಎಂವಿ ಎಕ್ಸ್ಟೆಂಶನ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದೇವನಹಳ್ಳಿ ಟೌನ್ನ ಬಿಬಿ ರಸ್ತೆಯ, ಹೊಸ ಬಸ್ಸ್ಟ್ಯಾಂಡ್ ಎದುರಿನ ಸರ್ಕಾರಿ ಕಿರಿಯ ಕಾಲೇಜು, 180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರ ಹಾಗೂ 181-ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ನೆಲಮಂಗಲ ಟೌನ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಸ್ಟರಿಂಗ್ ಮತ್ತು ಡಿ–ಮಸ್ಟರಿಂಗ್ ಕೇಂದ್ರವನ್ನಾಗಿ ಗುರುತಿಸಲಾಗಿದೆ ಎಂದು ಹೇಳಿದರು.
ಮತದಾನ ದಿನದಂದು ಮತದಾರರಿಗೆ ವಿಶೇಷ ಸೌಲಭ್ಯ:ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಎಂ.ಸಿ.ಸಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ವರ್ಣಿತ್ ನೇಗಿ ಅವರು ಮಾತನಾಡಿ, ಮೇ 10 ರಂದು ನಡೆಯುವ ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್-SVEEP) ಚಟುವಟಿಕೆಗಳನ್ನು ಹಮ್ಮಿಕೊಂಡು ಮತದಾನದ ಪ್ರಾಮುಖ್ಯತೆ, ಜಾಗೃತಿ ಮತ್ತು ಅರಿವನ್ನು ಮತದಾರರಲ್ಲಿ ಮೂಡಿಸಲಾಗಿದೆ. ಮತದಾನ ದಿನದಂದು ಮತಗಟ್ಟೆಗಳಲ್ಲಿ ಮತದಾರರಿಗೆ ವಿಶೇಷ ಸೌಲಭ್ಯಗಳಾದ ನೆರಳಿನ ವ್ಯವಸ್ಥೆ, ಶಾಮಿಯಾನ, ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ, ರ್ಯಾಂಪ್ ಅಂಡ್ ರೈಲಿಂಗ್ಸ್, ಗಾಲಿ ಕುರ್ಚಿ, ಅಗತ್ಯವಿರುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದರು.
ಮತದಾರರು ಮತದಾನ ಮಾಡುವಂತೆ ಆಕರ್ಷಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ತಲಾ 05 ರಂತೆ 20 ಮಹಿಳಾ(ಸಖಿ) ಮತಗಟ್ಟೆಗಳು, ತಲಾ 01 ರಂತೆ 04 ವಿಕಲಚೇತನ ಮತಗಟ್ಟೆಗಳು, ತಲಾ 01 ರಂತೆ 04 ಯುವ ಮತಗಟ್ಟೆಗಳು, ತಲಾ 01 ರಂತೆ 04 ಎತ್ನಿಕ್ ಮತಗಟ್ಟೆಗಳು ಹಾಗೂ ತಲಾ 01 ರಂತೆ 04 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಮತಯಂತ್ರಗಳು ಹಾಗೂ ಚುನಾವಣಾ ಸಾಮಾಗ್ರಿಗಳನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯವು ಇಂದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ, 178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೊಸಕೋಟೆ ಟೌನ್‌ನ ಎಂವಿ ಬಡಾವಣೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದೇವನಹಳ್ಳಿ ಟೌನ್ನ ಬಿಬಿ ರಸ್ತೆಯ, ಹೊಸ ಬಸ್ ನಿಲ್ದಾಣದ ಎದುರಿನ ಸರ್ಕಾರಿ ಪದವಿ ಪೂರ್ವ ಕಾಲೇಜು, 180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾದಗೊಂಡನಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರ ಹಾಗೂ 181-ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ನೆಲಮಂಗಲ ಟೌನ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಸ್ಟರಿಂಗ್ ಕೇಂದ್ರಗಳಲ್ಲಿ ನಡೆಯಿತು.
ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಮತಗಟ್ಟೆ ಬಂದೋಬಸ್ತ್‌ಗಾಗಿ ನಿಯೋಜಿತಗೊಂಡಿರುವ ಪೊಲೀಸರು ಹಾಗೂ ಗೃಹ ರಕ್ಷಕದಳದ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಲು ಆಯಾ ಮಸ್ಟರಿಂಗ್ ಕೇಂದ್ರಗಳ ಆವರಣದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ಲತಾ ಅವರು ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಅಧಿಕಾರಿಗಳು, ಸಿಬ್ಬಂದಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಆಯಾ ವಿಧಾನಸಭಾ ಕ್ಷೇತ್ರದ ಚುನಾವಣೆ ನಿಯೋಜಿತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಮತದಾನದ ಪ್ರಮಾಣ ಹೆಚ್ಚಿಸಲು ತಂತ್ರಜ್ಞಾನದ ಮೊರೆ ಹೋದ ಚುನಾವಣಾ ಆಯೋಗ; ಆ್ಯಪ್ ಮೂಲಕ ಮತಗಟ್ಟೆ ಕ್ಯೂ ಸ್ಥಿತಿಗತಿ ಮಾಹಿತಿ