ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ನವಜಾತ ಹೆಣ್ಣು ಶಿಶುವನ್ನು ಪೊದೆಯಲ್ಲಿ ಬಿಟ್ಟು ಹೋಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಾಡುಬ್ಯಾಡರಹಳ್ಳಿಯಲ್ಲಿ ನಡೆದಿದೆ. ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶಿಶುವನ್ನು ರಕ್ಷಣೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನಿಸಿದ್ದಾರೆ.
ತಾಲೂಕಿನ ಕಾಡುಬ್ಯಾಡರಹಳ್ಳಿಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಮನೆಗಳ ಸಂದಿ ಮಧ್ಯದಲ್ಲಿ ಬೆಳೆದಿದ್ದ ಹೂವಿನ ಗಿಡದ ಪೊದೆಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾರೆ. ಈ ಶಿಶುವನ್ನು ಇರುವೆಗಳು ಮುತ್ತಿಕೊಂಡಿತ್ತು. ಬಳಿಕ ಇರುವೆಗಳಿಂದ ರಕ್ಷಣೆ ಮಾಡಿದ ಸ್ಥಳೀಯರು ಮನೆಗೆ ತಂದು ಆರೈಕೆ ಮಾಡಿದ್ದಾರೆ. ನಂತರ ಜಿಲ್ಲಾ ಮಕ್ಕಳ ರಕ್ಷಣ ಘಟಕಕ್ಕೆ ಮಾಹಿತಿ ನೀಡಿದ್ದಾರೆ.
ಶಿಶುವನ್ನು ಯಾರು ಎಸೆದು ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಹೆಣ್ಣು ಮಗು ಎಂಬ ಕಾರಣಕ್ಕೆ ನವಜಾತ ಶಿಶುವನ್ನು ಬಿಟ್ಟು ಹೋಗಿರುವ ಶಂಕೆ ಇದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಗುವನ್ನು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲು ಮಾಡಿದ್ದು, ಸದ್ಯ ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.
ತಿಪ್ಪೆಗುಂಡಿಯಲ್ಲಿ ನವಜಾತ ಶಿಶು ಪತ್ತೆ :ಕಳೆದ ಆಗಸ್ಟ್ ತಿಂಗಳಲ್ಲಿಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದ ರಸ್ತೆ ಬದಿಯ ತಿಪ್ಪೆಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿತ್ತು. ಶಿಶುವನ್ನು ಗೋಣಿ ಚೀಲದ ಮೇಲೆ ಮಲಗಿಸಿ ತಿಪ್ಪೆಗುಂಡಿಯಲ್ಲಿ ಬಿಟ್ಟು ಹೋಗಿದ್ದರು. ಮಗು ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದರು. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಮತ್ತು ತಾಲೂಕು ಆಸ್ಪತ್ರೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.ಬಳಿಕ ಸ್ಥಳಕ್ಕೆ ಧಾವಿಸಿದ್ದ ಸಿಬ್ಬಂದಿ ಶಿಶುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಪೊಲೀಸ್ ಕಾನ್ಸ್ಸ್ಟೇಬಲ್ ಮೇಲೆ ಮಗವನ್ನು ಕೊಂದ ಆರೋಪ :ಪೊಲೀಸ್ ಕಾನ್ಸ್ಸ್ಟೇಬಲ್ ಒಬ್ಬರು ತನ್ನ 4 ತಿಂಗಳ ಮಗುವನ್ನು ಡಾಂಬರು ರಸ್ತೆಗೆಸೆದು ಕೊಲೆಗೈದಿರುವ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಮುಡಲಗಿ ತಾಲೂಕಿನ ದುರದುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸ್ ಕಾನ್ಸ್ಟೆಬಲ್ ಬಸಪ್ಪ ಬಳುಣಕಿ ಕೊಲೆಗೈದ ಆರೋಪಿ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಕಲಬುರಗಿ: ತಿಪ್ಪೆಗುಂಡಿಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ; ರಕ್ಷಿಸಿ ಮಾನವೀಯತೆ ಮೆರೆದ ಸ್ಥಳೀಯರು