ಬಾಗಲಕೋಟೆ:ಕಳೆದ ಮೂರು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದೇನೆ. ಉತ್ತರ ಕರ್ನಾಟಕದಲ್ಲಂತೂ ಎಲ್ಲೆಡೆ ಆಮ್ ಆದ್ಮಿ ಪಕ್ಷಕ್ಕೆ ಮಹತ್ವ ದೊರಕುತ್ತಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನತೆ ಆಪ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಯ ರಬಕವಿ-ಬನಹಟ್ಟಿ ತಹಶೀಲ್ದಾರ್ ಕಚೇರಿಯಲ್ಲಿ ತೇರದಾಳ ಕ್ಷೇತ್ರದ ಆಪ್ ಅಭ್ಯರ್ಥಿ ಅರ್ಜುನ ಹಲಗಿಗೌಡರ ಪರ ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಪಂಜಾಬ್ ರಾಜ್ಯದಲ್ಲಿಯೂ ಇದೇ ಪರಿಸ್ಥಿತಿಯಿತ್ತು. ಮತದಾರರು ಆಮ್ ಆದ್ಮಿ ಪಕ್ಷದ ಮೇಲಿನ ವಿಶ್ವಾಸ ಹಾಗೂ ದೆಹಲಿಯಲ್ಲಿ ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಆಶೀರ್ವದಿಸಿ ಸರ್ಕಾರ ಮಾಡುವುದರ ಜೊತೆಗೆ, ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಪಂಜಾಬ್ ಮುಖ್ಯಮಂತ್ರಿಯನ್ನಾಗಿಸಿದ್ದಾರೆ. ಇದೇ ಮಾದರಿ ಕರ್ನಾಟಕದಲ್ಲಿಯೂ ನಡೆಯಲಿದೆ ಎಂದರು.
ಮುಂದುವರೆದು ಮಾತನಾಡಿ, ಸರ್ಕಾರ ರೂಪಿಸಲು ಯಾವುದೇ ತಂತ್ರಗಾರಿಕೆ ಬೇಕಿಲ್ಲ. ಪ್ರಾಮಾಣಿಕ ಹಾಗೂ ಜನತೆಗೆ ಉದ್ಯೋಗ ಸೃಷ್ಟಿಸುವುದರೊಂದಿಗೆ ರೈತರಿಗೆ ಒಳಿತಾಗುವ ಕಾರ್ಯದಲ್ಲಿ ತೊಡಗುವಲ್ಲಿ ಆಪ್ ನಿಸ್ಸೀಮವಿದೆ. ಇದೊಂದು ವಿಶ್ವಾಸದಿಂದ ಸರ್ಕಾರ ನಿಶ್ಚಿತವಾಗಿದ್ದು, ಎಲ್ಲೆಡೆ ಅಭ್ಯರ್ಥಿಗಳು ಭರದಿಂದ ಪ್ರಚಾರದಲ್ಲಿ ತೊಡಗಿದ್ದು, ಹೊಸ ಪ್ರಯೋಗದಲ್ಲಿ ವಿನೂತನ ಸಾಧನೆ ಆಪ್ ಮಾಡಲಿದೆ ಎಂದರು.