ಬಾಗಲಕೋಟೆ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆ ಆಗುತ್ತಿರುವ ಹಿನ್ನೆಲೆ, ಬಾಗಲಕೋಟೆ ಜಿಲ್ಲೆಯ ಬಿಜೆಪಿ ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದರಿಂದ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಬಾಗಲಕೋಟೆ ಜಿಲ್ಲೆಯ ಏಳು ಮತ ಕ್ಷೇತ್ರದಲ್ಲಿ ಈಗಾಗಲೇ ಐವರು ಬಿಜೆಪಿ ಶಾಸಕರು ಮತ್ತು ಇಬ್ಬರು ಕಾಂಗ್ರೆಸ್ ಶಾಸಕರು ಇದ್ದಾರೆ. ಅದರಲ್ಲಿ ಬಾದಾಮಿ ಮತಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಾಗಿರುವುದು ವಿಶೇಷವಾಗಿತ್ತು.
ಈಗ ಬಿಜೆಪಿ ಸರ್ಕಾರ ರಚನೆ ಆದಲ್ಲಿ ಮುಧೋಳ ಶಾಸಕರಾಗಿರುವ ಗೋವಿಂದ ಕಾರಜೋಳ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ. ಯಾಕೆಂದರೆ ರಾಜ್ಯಮಟ್ಟದಲ್ಲಿ ಇವರು ಬಿಜೆಪಿ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಇನ್ನು ಬೀಳಗಿ ಮತಕ್ಷೇತ್ರದ ಶಾಸಕರಾಗಿರುವ ಮುರಗೇಶ ನಿರಾಣಿ ಅವರು ಯಡಿಯೂರಪ್ಪನವರ ಆಪ್ತರಾಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಬಹಳಷ್ಟು ಸೇವೆ ಸಲ್ಲಿಸುತ್ತಿರುವ ಮುರಗೇಶ ನಿರಾಣಿ ಅವರು, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ಬೆಂಬಗಲಿರ ಅಭಿಪ್ರಾಯ.
ಬಾಗಲಕೋಟೆ ಶಾಸಕರಾದ ವೀರಣ್ಣ ಚರಂತಿಮಠ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ, ಅಭಿವೃದ್ಧಿ ಪರ ಎಂದು ಹೆಸರು ವಾಸಿಯಾಗಿದ್ದರೆ. ಈ ಸಲ ಶಿಕ್ಷಣ ಸಚಿವರಾಗಲಿದ್ದಾರೆ ಎಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿದೆ. ಆದರೆ, ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ಪಷ್ಟನೆ ನೀಡಿ, ನನಗೆ ಯಾವುದೇ ಸಚಿವ ಸ್ಥಾನದ ಆಕಾಂಕ್ಷೆ ಇಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲೆಗೆ ಐದು ಶಾಸಕರಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಗಲಿದೆ, ಗೋವಿಂದ ಕಾರಜೋಳರಿಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದ್ದರೆ, ಮುರಗೇಶ ನಿರಾಣಿ ಅಥವಾ ವೀರಣ್ಣ ಚರಂತಿಮಠ ಎಂಬುದು ಇನ್ನು ಸ್ಪಷ್ಟತೆ ಇಲ್ಲ. ತೇರದಾಳ ಮತಕ್ಷೇತ್ರದ ಶಾಸಕರಾಗಿರುವ ಸಿದ್ದು ಸವದಿ ಹಾಗೂ ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ ಅವರೂ ಸಚಿವ ಸ್ಥಾನದ ಆಕಾಂಕ್ಷೆ ಹೊಂದಿದ್ದರೂ ಅವರಿಗೆ ಸಚಿವ ಸ್ಥಾನ ಸಿಗುವುದು ಅನುಮಾನವಿದೆ. ಏಕೆಂದರೆ ಈಗಾಗಲೇ ರಾಜೀನಾಮೆ ನೀಡಿದ ಶಾಸಕರ ಒತ್ತಡಕ್ಕೂ ಬಿಎಸ್ವೈ ಮಣಿಯಲೇಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.