ಬಾದಾಮಿ :ಮಲಪ್ರಭಾ ನದಿಯಿಂದ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ.. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ - Badami MLA Siddaramaiah
ಕಣ್ಣಿಗೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ನೆರೆ ವೀಕ್ಷಣೆಗೆ ಬಂದಿರಲಿಲ್ಲ. ಅದಕ್ಕಾಗಿ ಮಗ ಡಾ. ಯತೀಂದ್ರ ಅವರನ್ನ ಕಳುಹಿಸಿಕೊಟ್ಟು ವೀಕ್ಷಣೆ ಮಾಡಿಸಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಸಂತ್ರಸ್ತರಿಗೆ ಅಗತ್ಯ ನೆರವು ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಬಾದಾಮಿ ಶಾಸಕ ಸಿದ್ದರಾಮಯ್ಯ ತಿಳಿಸಿದರು.
ನರಗುಂದ ಮಾರ್ಗವಾಗಿ ಆಗಮಿಸಿ ಸಿದ್ದರಾಮಯ್ಯನವರು ಕರ್ಲಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಚರ್ಚೆ ನಡೆಸಿದರು. ಸಮಸ್ಯೆ ಆಲಿಸಿ ನಂತರ ಸಂತ್ರಸ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಣ್ಣಿಗೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ನೆರೆ ವೀಕ್ಷಣೆಗೆ ಬರಲಿಲ್ಲ. ಪುತ್ರ ಡಾ. ಯತೀಂದ್ರ ಅವರನ್ನ ಕಳುಹಿಸಿಕೊಟ್ಟು ವೀಕ್ಷಣೆ ಮಾಡಿಸಿದ್ದೇನೆ. ಎಲ್ಲಾ ಕಾಂಗ್ರೆಸ್ ಮುಖಂಡರನ್ನೂ ವೀಕ್ಷಣೆ ಮಾಡುವಂತೆ ಹೇಳಿದ್ದೆ, ಅವರು ಕೂಡಾ ನೆರವಾಗಿದ್ದಾರೆ. ಕೆಲವು ದಾನಿಗಳಿಂದಲೂ ಅಗತ್ಯ ಸಾಮಾನುಗಳನ್ನು ಕೊಡಲು ಹೇಳಿದ್ದೆ. ಸಂತ್ರಸ್ತರಿಗೆ ಅಗತ್ಯ ನೆರವು ಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಪ್ರವಾಹದ ವೇಳೆ ಮೃತಪಟ್ಟ 58 ವರ್ಷದ ಕರ್ಲಕೊಪ್ಪ ಗ್ರಾಮದ ಭೀಮಪ್ಪ ಜಾಲಿಕಟ್ಟಿ ಎಂಬುವ ಕುಟುಂಬದವರಿಗೆ ಐದು ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿದರು. ಶಾಸಕ ಎಸ್ ಕೆ ಸೋಮಶೇಖರ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದು, ಅಗತ್ಯ ವಸ್ತುಗಳನ್ನು ಹಂಚಿದರು. ಮೂರು ದಿನಗಳ ಕಾಲ ಬಾದಾಮಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚಾರ ಮಾಡಿ, ಸಂತ್ರಸ್ತರ ಸಮಸ್ಯೆ ಆಲಿಸಲಿದ್ದಾರೆ.