ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ವಿಶೇಷ ಸದ್ದು ಮಾಡಿದ್ದ ಹಳೆ ಹುಬ್ಬಳ್ಳಿಯ ವೀರ ಭೀಕ್ಷಾವ್ರತಿ ಮಠದ ಪೀಠಾಧ್ಯಕ್ಷ ಶಿವಶಂಕರ ಶ್ರೀ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದನ್ನು ಹಿಂಪಡೆದಿದ್ದಾರೆ.
ನಾಮಪತ್ರ ಹಿಂಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅವರು, ಸನ್ಯಾಸಿ ಧರ್ಮ, ಗುರು, ಪೀಠ ಹಾಗೂ ಸಮಾಜದ ನಂತರ ರಾಜಕೀಯವಿದೆ. ಇದನ್ನು ಗಮನಿಸದೆ ಕುರುಹಿನಶೆಟ್ಟಿ ಹಾಗೂ ಹಟಗಾರ ಸಮುದಾಯಗಳ ಹಿರಿಯರ, ಹಿಂದುಳಿದ ವರ್ಗ, ದೀನ ದಲಿತರ ಒತ್ತಡಕ್ಕೆ ಹಾಗೂ ನೇಕಾರರಿಗೆ ಆದ ಅನ್ಯಾಯ ಸಹಿಸಿಕೊಳ್ಳಲಾಗದೇ ಸ್ಪರ್ಧೆಗೆ ನಿಲ್ಲುವಂತೆ ಒತ್ತಾಯಿಸಿದ ಕಾರಣ ನಾಮಪತ್ರ ಸಲ್ಲಿಸಿದ್ದೆ. ಇದೀಗ ಕೊಲ್ಹಾಪುರ ಕಣೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಆದೇಶದಂತೆ ಹಾಗೂ ವೈಯಕ್ತಿಕವಾಗಿ ನನಗೂ ಬೇಸರವಾದ ಕಾರಣ ನಾಮಪತ್ರ ಹಿಂಪಡೆಯುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ: ಶ್ರೀ ಯಲ್ಲಮ್ಮದೇವಿ ಆಶೀರ್ವಾದ ಯಾರಿಗೆ..?
ಸ್ಪರ್ಧೆ ವೇಳೆ ಕೆಲ ಹಿರಿಯರು ಹಾಗೂ ಮಠಾಧೀಶ ಪ್ರಭುಗಳ ಅನುಮತಿ ಪಡೆಯದಿರುವುದು ತಪ್ಪಾಗಿದೆ. ಒಟ್ಟಾರೆ ರಾಜಕೀಯ ಕ್ಷೇತ್ರ ನನಗಿಷ್ಟವಿಲ್ಲ. ಭಕ್ತರು ಹಾಗೂ ನನಗೆ ಬೆಂಬಲಿಸುವ ಎಲ್ಲ ಸಮಾಜಗಳ ಹಿರಿಯರಿಗೆ ತಪ್ಪು ಸಂದೇಶ ಹೋಗಬಾರದು. ತಮಗೆ ಆಯಾ ಪಕ್ಷ ಹಾಗೂ ಪಕ್ಷೇತರ ಮಾರ್ಗಗಳಂತೆ ರಾಜಕೀಯ ಮುನ್ನಡೆಸಲು ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು. ಇದರಿಂದ ಸ್ವಾಮೀಜಿಯೊಬ್ಬರ ಸ್ಪರ್ಧೆಯಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮಧ್ಯೆ ಹಣಾಹಣಿಗೆ ಕಾರಣವಾಗಿದೆ.