ಬಾಗಲಕೋಟೆ:ಕೇಂದ್ರ ಸರ್ಕಾರದ ರಾಷ್ಟ್ರೀಯ ದೀನ ದಯಾಳ್ ಅಂತ್ಯೋದಯ ಯೋಜನೆ ಹಾಗೂ ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿ ಮಹಿಳಾ ಸ್ವ-ಸಹಾಯ ಸಂಘಗಳು ಆರ್ಥಿಕ ಸ್ವಾವಲಂಬನೆಯತ್ತ ಸಾಗಿವೆ. ಸಂಜೀವಿನಿ ಮಹಿಳಾ ಒಕ್ಕೂಟ ರಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮಹಿಳೆಯರು ಸಬಲರಾಗುತ್ತಿದ್ದಾರೆ.
ಜಿಲ್ಲೆಯ ಹಲವು ಮಹಿಳಾ ಸಂಘಗಳು ರಾಜ್ಯ ಹಾಗೂ ಕೇಂದ್ರದ ಧನಸಹಾಯ ಪಡೆದು ಪ್ರತಿ ತಿಂಗಳು 20 ರಿಂದ 30 ಸಾವಿರ ರೂಪಾಯಿವರೆಗೆ ಆದಾಯ ಗಳಿಸುತ್ತಿದ್ದಾರೆ.
ಗ್ರಾಮೀಣ ಮಹಿಳೆಯರ ಬದುಕಿಗೆ ಆಸರೆಯಾದ ಸ್ವ-ಸಹಾಯ ಸಂಘಗಳು ಸಂಘದಲ್ಲಿ ಕಡಿಮೆ ಬಡ್ಡಿಗೆ ಸಿಗಲಿದೆ ಸಾಲ
ಜಿಲ್ಲೆಯ 170 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6 ಸಾವಿರ ಮಹಿಳಾ ಸ್ವ-ಸಹಾಯ ಸಂಘಟನೆಗಳಿದ್ದು, ಇದರಲ್ಲಿ 68 ಸಾವಿರ ಮಹಿಳಾ ಸದಸ್ಯರು ಇದ್ದಾರೆ. ಈಗಾಗಲೇ 1,081 ಮಹಿಳಾ ಸಂಘಗಳಿಗೆ 9.50 ಕೋಟಿ ಅನುದಾನ ನೀಡಲಾಗಿದೆ. ಇಂತಹ ಸಂಘಟನೆಯ ಒಬ್ಬ ಸದಸ್ಯರಿಗೆ 30 ಸಾವಿರದಿಂದ ಒಂದು ಲಕ್ಷ ರೂ. ವರೆಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.
ಈ ಸೌಲಭ್ಯ ಪಡೆದಿರುವ ಸ್ವ-ಸಹಾಯ ಸಂಘಗಳು ಮನೆಯಲ್ಲೇ ಅನೇಕ ವಸ್ತುಗಳ ತಯಾರಿಸಿ ಮಾರಾಟ ಮಾಡುತ್ತಾರೆ. ಸಂಘದ ವತಿಯಿಂದಲೂ ಎಲ್ಲರೂ ಜೊತೆಗೂಡಿ ಹಲವು ಉತ್ಪನ್ನಗಳ ತಯಾರಿ ಮತ್ತು ಮಾರಾಟ ಮಾಡಿ ಸಂಘದ ಬೆಳವಣಿಗೆ ಜೊತೆಗೆ ವೈಯಕ್ತಿಕವಾಗಿ ಆರ್ಥಿಕ ಸ್ವಾವಲಂಬಿಗಳಾಗುತ್ತಿದ್ದಾರೆ.
ಮನೆಯಲ್ಲೇ ವಿವಿಧ ವಸ್ತು ತಯಾರಿ
ರೊಟ್ಟಿ, ಹಪ್ಪಳ, ಬ್ಯಾಗು, ಹೈನುಗಾರಿಕೆ, ಹೊಲಿಗೆ ಹೀಗೆ ಹತ್ತಾರು ಕೆಲಸ ಕಾರ್ಯಗಳ ಮಾಡುತ್ತಾ ಆದಾಯ ಗಳಿಸುತ್ತಾರೆ. ಸಂಜೀವಿನಿ ಒಕ್ಕೂಟದ ಮೂಲಕ ಗೃಹೋಪಯೋಗಿ ವಸ್ತುಗಳು ತಯಾರಿಸುತ್ತಾರೆ. ಅಲಂಕಾರಿಕ ವಸ್ತುಗಳು, ದಿನಬಳಕೆ ವಸ್ತು, ಆಹಾರ ಪದಾರ್ಥಗಳನ್ನು ತಯಾರಿಕೆ ಬಳಿಕ ಅವುಗಳನ್ನು ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.
ಬದಾಮಿ, ಬಾಗಲಕೋಟೆ, ಕೆರೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ನಡೆಯುವ ಸಂತೆ, ಮಾರುಕಟ್ಟೆಗಳಿಗೆ ಹೋಗಿ ಮಾರಾಟ ಮಾಡುತ್ತಾರೆ. ಇದರ ಜೊತೆಗೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ವತಿಯಿಂದ ಈ ವಸ್ತುಗಳನ್ನು ಆನ್ಲೈನ್ ಮೂಲಕವೂ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ ಸಾವುನೋವು; ಗ್ರಾಮದತ್ತ ಸುಳಿಯದ ಉಸ್ತುವಾರಿ ಸಚಿವ