ಬಾಗಲಕೋಟೆ :ಕಳೆದ ಹಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿನ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಜಿಲ್ಲೆಯಲ್ಲಿನ ಕೆಲ ಜಲಪಾತಗಳ ಸಮಗ್ರ ಮಾಹಿತಿ ಇಲ್ಲಿದೆ.
ಬಾಗಲಕೋಟೆಯಲ್ಲಿವೆ ಅದ್ಭುತ ಜಲಪಾತಗಳು.. ಬಾದಾಮಿ ಅಕ್ಕ-ತಂಗಿಯರ ಜಲಪಾತ:ಬಾದಾಮಿ ಪಟ್ಟಣದ ಐತಿಹಾಸಿಕ ಸ್ಥಳವಾಗಿರುವ ಭೂತನಾಥ ದೇವಾಲಯದ ಹಿಂದೆ ಅಕ್ಕ-ತಂಗಿಯರ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಈ ನೀರು ಅಗಸ್ತ್ಯತೀರ್ಥ ಹೊಂಡಕ್ಕೆ ಸೇರುತ್ತದೆ. ಇದು ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ.
ಹುಲಿಗೆಮ್ಮ ಕೊಳ್ಳ ಜಲಪಾತ :ಬಾದಾಮಿ ತಾಲೂಕಿನ ಬಿ ಎನ್ ಜಾಲಿಹಾಳ ಗ್ರಾಮದಿಂದ 3 ಕಿ.ಮೀ ದೂರದಲ್ಲಿರುವ ಹುಲಿಗೆಮ್ಮ ಕೊಳ್ಳವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಚಾಲುಕ್ಯರ ಕಾಲದಲ್ಲಿ ಈ ಪ್ರದೇಶವನ್ನು ಖಜಾನೆಯನ್ನಾಗಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಸುಂದರ ಪ್ರಕೃತಿ ಮಧ್ಯೆಯಿರುವ ಹುಲಿಗೆಮ್ಮ ಕೊಳ್ಳದಲ್ಲಿ ಸಾಧು-ಸಂತರು ತಪಸ್ಸು ಮಾಡುತ್ತಿದ್ದರು. ಚಾಲುಕ್ಯ ರಾಜರು ಕೂಡ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಈ ಜಲಪಾತ ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 45 ಕಿ.ಮೀ ದೂರದಲ್ಲಿದೆ.
ಗುಳೇದಗುಡ್ಡದ ದಿಡಗಿನ ಜಲಪಾತ :ಗುಳೇದಗುಡ್ಡ ಪಟ್ಟಣದ ಬೆಟ್ಟದ ಮೇಲಿರುವ ಈ ದಿಡಗಿನ ಜಲಪಾತಕ್ಕೆ 5 ಕಿ.ಮೀ ನಡೆದುಕೊಂಡೆ ಹೋಗಬೇಕು. ಸದ್ಯ ಭಾರೀ ಮಳೆಯಾಗುತ್ತಿರುವುದರಿಂದ ಈ ಜಲಪಾತ ಮೈದುಂಬಿ ಹರಿಯುತ್ತಿದೆ. ಸುಮಾರು 35 ಅಡಿ ಎತ್ತರದಿಂದ ನೀರು ಬೀಳುವ ಮೂಲಕ ಈ ಭಾಗದಲ್ಲಿ ಸುಂದರ ಜಲಪಾತ ಸೃಷ್ಟಿಯಾಗುತ್ತದೆ. ಬೆಟ್ಟ ಗುಡ್ಡಗಳ ಹಸಿರು ಸಿರಿಯ ಮಧ್ಯೆ ಹಾಲಿನ ನೊರೆಯಂತೆ ಹರಿಯುವ ಜಲಪಾತ ನೋಡುವುದೇ ಮನಮೋಹಕ. ಇದು ಜಿಲ್ಲಾ ಕೇಂದ್ರದಿಂದ 22 ಕಿ.ಮೀ ದೂರದಲ್ಲಿದೆ.
ಸಿದ್ದನಕೊಳ್ಳ ಜಲಪಾತ :ಇಲಕಲ್ಲ ತಾಲೂಕಿನಲ್ಲಿರುವಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರ ಸಿದ್ದನಕೊಳ್ಳ ಜಲಪಾತ ಐತಿಹಾಸಿಕ ಕೇಂದ್ರ ಐಹೊಳೆಯಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಸಿದ್ದಪ್ಪಜ್ಜ ಮಠವಿರುವ ಹಿನ್ನೆಲೆ ಇದನ್ನು ಸಿದ್ದನಕೊಳ್ಳ ಎಂದು ಕರೆಯಲಾಗುತ್ತಿತ್ತು. ಇದು ಪವಾಡ ಪುರುಷರ ಪ್ರಸಿದ್ಧ ತಾಣ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಅನೇಕ ಸ್ಮಾರಕಗಳು ಇಲ್ಲಿ ಕಾಣಸಿಗುತ್ತವೆ. ಇತ್ತೀಚಿಗೆ ಡಾ.ಶಿವಕುಮಾರ್ ಸ್ವಾಮೀಜಿಗಳ ನೇತೃತ್ವದಲ್ಲಿ 24 ಗಂಟೆಗಳ ಕಾಲ ದಾಸೋಹ ನಡೆಯುತ್ತಿದ್ದು, ಕಲಾವಿದರ ನೆಚ್ಚಿನ ತಾಣವಾಗಿದೆ.
ದಮ್ಮೂರ ದಿಡಗ ಜಲಪಾತ: ಇಲಕಲ್ಲ ತಾಲೂಕಿನ ದಮ್ಮೂರ ಗ್ರಾಮದ ಬೆಟ್ಟದ ತುದಿಯಲ್ಲಿರುವ ದಮ್ಮೂರ ದಿಡಗ ಜಲಪಾತ ನಯನ ಮನೋಹರ. ಬೆಟ್ಟದ ತುದಿಯಿಂದ ಜಲಪಾತ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ. ಮಳೆಗಾಲ ಸಂದರ್ಭದಲ್ಲಿ ಈ ಜಲಪಾತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದು ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿದೆ. ಅಮೀನಗಡದಿಂದ ಗುಡೂರ ಗ್ರಾಮದ ಮಾರ್ಗವಾಗಿ ಇಲ್ಲಿಗೆ ಹೋಗಬಹುದು.
ರಂಗ ಸಮುದ್ರ ಡ್ಯಾಂ :ಬಾದಾಮಿ ತಾಲೂಕಿನ ಭೀಮನಗಡ ಗ್ರಾಮದ ಬಳಿಯಿರುವ ರಂಗ ಸಮುದ್ರ ಡ್ಯಾಂ ಬೃಹತ್ ಕೆರೆಯಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು ಐದು ದಶಕಗಳ ಹಿಂದೆ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಒದಗಿಸುವ ಉದ್ದೇಶದಿಂದ ರಂಗಸಮುದ್ರ ಡ್ಯಾಂ ನಿರ್ಮಾಣ ಮಾಡಲಾಗಿದೆ. ಪ್ರತಿವರ್ಷ ಮಳೆಯಿಲ್ಲದೆ ಕಳೆಗುಂದಿದ್ದ ಈ ಡ್ಯಾಂ ಈ ಬಾರಿ ತುಂಬಿ ಹರಿಯುತ್ತಿದೆ. ಇದು ಜಿಲ್ಲಾ ಕೇಂದ್ರದಿಂದ 65 ಕಿ.ಮೀ ದೂರದಲ್ಲಿದ್ದು, ಪಟ್ಟದಕಲ್ಲು ಮಾರ್ಗವಾಗಿ ಗುಡೂರಿಗೆ ಹೋಗುವ ರಸ್ತೆಯಲ್ಲಿ ಈ ಡ್ಯಾಂ ಕಾಣಸಿಗುತ್ತದೆ.