ಬಾಗಲಕೋಟೆ: ಜಿಲ್ಲೆಯಲ್ಲಿ ಇನ್ನು ಮುಂದೆ ಪರವಾನಗಿ ಕೊಟ್ಟಿರುವ ಮದುವೆ ಸಹ ರದ್ದುಗೊಳಿಸಲಾಗಿದೆ. ಮದುವೆಯಿಂದಲೇ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದಿಂದ ಅನುಮತಿ ಪಡೆದುಕೊಂಡಿರುವ ಮದುವೆ ಸಹ ರದ್ದು ಮಾಡಲಾಗಿದೆ.
ಇದನ್ನು ಮೀರಿ ಸಾರ್ವಜನಿಕ ವಾಗಿ ಮದುವೆ ಮಾಡಿಕೊಂಡಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ, ಈಗಾಗಲೇ 40 ಜನರಿಗೆ ಅನುಮತಿ ನೀಡಲಾಗಿತ್ತು. ಅದು ಸಹ ರದ್ದುಗೊಳಿಸಿದ್ದು, ಕೇವಲ ಮನೆಯಲ್ಲಿ ನಾಲ್ಕು ಜನರ ಮಧ್ಯೆ ಮಾತ್ರ ಮದುವೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಪರವಾನಗಿ ಕೊಟ್ಟಿರುವ ಮದುವೆಗಳಿಗೂ ನಿರ್ಬಂಧ: ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಇದೇ ಸಮಯದಲ್ಲಿ ಮಾತನಾಡಿ, ಕೋವಿಡ್ ರೋಗ ಹೆಚ್ಚಾಗುತ್ತಿರುವ ಹಿನ್ನೆಲೆ, ಯಾವ ವ್ಯಕ್ತಿ, ನೆಗಡಿ,ಕೆಮ್ಮು,ಜ್ವರ ಬರುತ್ತದೆ ಅಂತಹವರಿಗೆ ಕೋವಿಡ್ ಕೇರ ಸೆಂಟರ್ನಲ್ಲಿ ಇಡಲಾಗುವುದು. ಈ ಮೂಲಕ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆ ಆಗಲಿದೆ ಎಂದ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ನೀಡದೇ ಹಣ ವಸೂಲಿ ಮಾಡುತ್ತಿರುವ ಆಸ್ಪತ್ರೆಗಳ ಮೇಲೆ ನೋಟಿಸ್ ನೀಡಲಾಗಿದೆ. ಕೊರೊನಾ ರೋಗಿಗಳಿಗೆ ವೈದ್ಯರು ನೋಡದೆ, ಕೇವಲ ನರ್ಸ್ಗಳ ಮೂಲಕ ಚಿಕಿತ್ಸೆ ನೀಡಿ,ಲಕ್ಷಾಂತರ ಹಣ ವಸೂಲಿ ಮಾಡಲಾಗುತ್ತಿರುವ ಆರೋಪ ಕೇಳಿ ಬಂದಿತ್ತು.ಇಂತಹ ಎರಡು ಆಸ್ಪತ್ರೆ ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಇನ್ನು ಮುಂದೆ ಬೆಡ್ ಗಳ ವ್ಯವಸ್ಥೆ ಬಗ್ಗೆ ಜಿಲ್ಲಾಡಳಿತ ಭವನದಲ್ಲಿಯೇ 24*7 ರೀತಿಯಲ್ಲಿ ಮಾಹಿತಿ ಒದಗಿಸುವ ಕೇಂದ್ರ ತೆರೆಯಲಾಗಿದೆ. ರೋಗಿಗಳು ಮಾಹಿತಿ ಪಡೆದುಕೊಂಡು, ಬೆಡ್ ಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ. ಯಾವುದೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ತೊಂದರೆ ಉಂಟಾದಲ್ಲಿ ಮಾಹಿತಿ ಕೇಂದ್ರ ದಿಂದ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.