ಬಾಗಲಕೋಟೆ: ವಿದೇಶದಿಂದ ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಕಡ್ಡಾಯವಾಗಿ 14 ದಿನಗಳವರೆಗೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿಯಲ್ಲಿ 76 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಬಲಿಯಾಗಿರುವುದನ್ನು ಆರೋಗ್ಯ ಇಲಾಖೆ ಧೃಡಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಗಣದಲ್ಲಿ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ವೈರಸ್ ಕಂಡುಬಂದಿಲ್ಲ. ಆದರೂ ಸಹ ಜಿಲ್ಲೆಯ ಆಯಾ ತಾಲೂಕಿನ ತಹಶೀಲ್ದಾರರು ವಿದೇಶಗಳಿಗೆ ಹೋಗಿ ಮರಳಿ ಬರುವವರನ್ನು ಪ್ರತಿದಿನ ಟ್ರೇಸ್ ಮಾಡಿ ಮಾಹಿತಿ ಪಡೆದು ತಾಲೂಕು ವೈದ್ಯಾಧಿಕಾರಿಗಳಿಗೆ ನೀಡಬೇಕು.
ಅಲ್ಲದೇ ಗ್ರಾಮವಾರು ಸಹ ಗ್ರಾಮ ಲೆಕ್ಕಾಧಿಕಾರಿಗಳಿಂದಲೂ ಈ ಕುರಿತು ಮಾಹಿತಿ ಕಲೆಹಾಕಬೇಕು ಎಂದರು. ನಿಗಾ ಕೊಠಡಿಯಲ್ಲಿರಿಸಿದ ವ್ಯಕ್ತಿಯಲ್ಲಿ ಕೊರೊನಾ ವೈರಸ್‍ನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗೆ ಮಾಹಿತಿ ನೀಡಿ ತಪಾಸಣೆಗೆ ಒಳಪಡಿಸುವ ಕೆಲಸವಾಗಬೇಕು. ಲಕ್ಷಣಗಳು ಕಂಡುಬಂದ ವ್ಯಕ್ತಿಯ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ತಗಲಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು.
ಸಾರ್ವಜನಿಕರು ಸಹ ವಿದೇಶ ಪ್ರವಾಸ ಮುಗಿಸಿ ಜಿಲ್ಲೆಗೆ ಬಂದ ವ್ಯಕ್ತಿಗಳ ಮಾಹಿತಿಯನ್ನು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗೆ ನೀಡಿ ಸಹಕರಿಸಬೇಕೆಂದು ಕೋರಿದರು. ಐತಿಹಾಸಿಕ ತಾಣಗಳಾದ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಗೆ ವಿದೇಶದಿಂದ ಹೆಚ್ಚಾಗಿ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿಗರ ಬಗ್ಗೆ ನಿಗಾ ವಹಿಸಿ ಮಾಹಿತಿ ಪಡೆದುಕೊಳ್ಳಬೇಕು. ಪ್ರವಾಸಿಗರು ತೆರಳುವ ಹೋಟೆಲ್, ಹೋಮ್ ಸ್ಟೇಗಳಿಗೆ ಬರುವ, ತಂಗುವವರ ಬಗ್ಗೆ ಮಾಹಿತಿ ಕಲೆಹಾಕಿ ತಪಾಸಣೆಗೆ ಒಳಪಡಿಸಬೇಕು. ಪ್ರವಾಸಿ ಸ್ಥಳಗಳ ವ್ಯಾಪ್ತಿಯಲ್ಲಿ ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸುವಂತೆ ಆಯಾ ತಾಲೂಕಿನ ತಹಶೀಲ್ದಾರರಿಗೆ ಸೂಚಿಸಿದರು.
ಜಿಲ್ಲೆಯ ಜನತೆ ಕರೊನಾ ವೈರಸ್ ಬಗ್ಗೆ ಆತಂತ ಪಡುವ ಅಗತ್ಯವಿಲ್ಲ. ವೈರಸ್ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.